‘ಬಂಧನ ವಾರಂಟ್’ ಫೇಕ್ ನ್ಯೂಸ್| ಮಾರಿಕೊಂಡವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದ ನಟ ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್
ಬೆಂಗಳೂರು: ತಮ್ಮ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಅದನ್ನು ‘ಫೇಕ್ ನ್ಯೂಸ್’ ಎಂದು ತಳ್ಳಿಹಾಕಿದ್ದಾರೆ.
ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ ಎಂದು ರವಿವಾರ ಹಲವು ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಒಂದೇ ಹೆಸರಿನಲ್ಲಿ ನಾಲ್ಕು ಮತದಾರರ ಗುರುತಿನ ಚೀಟಿಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ದಿಲೀಪ್ ಕುಮಾರ್ ಸಲ್ಲಿಸಿದ್ದ ದೂರಿನ ಮೇರೆಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟ ಪ್ರಕಾಶ್ ರಾಜ್ ವಿರುದ್ಧ ವಾರಂಟ್ ಹೊರಡಿಸಿದೆ ಎಂದು ವರದಿಗಳು ಹೇಳಿದ್ದವು.
ಈ ಹಿಂದೆ ಪ್ರಕಾಶ್ ರಾಜ್ ವಿರುದ್ಧ ಎರಡು ಬಾರಿ ಜಾಮೀನು ರಹಿತ ವಾರಂಟ್ ಗಳನ್ನು ಹೊರಡಿಸಲಾಗಿದ್ದರೂ ಅವರು ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮತ್ತೊಮ್ಮೆ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿತ್ತು.
ಈ ಕುರಿತು ರವಿವಾರ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ವೈರಲ್ ಆಗಿದ್ದ ವರದಿಯ ಚಿತ್ರವನ್ನು ಹಂಚಿಕೊಂಡು ಅದನ್ನು ‘ಫೇಕ್ ನ್ಯೂಸ್’ ಎಂದು ಕರೆದಿದ್ದಾರೆ.
‘ಸುಳ್ಳುಸುದ್ದಿ ಸೃಷ್ಟಿಯಲ್ಲಿ ಕಾರ್ಯನಿರತರಾದ ಮಾರಿಕೊಂಡವರು. ಪಾಪ, ತುಂಬಾ ನೋವಾಗಿದೆ. ಸೋಲ್ಡ್ ಔಟ್ ಫೆಲೋಸ್... ಫೇಕ್ ನ್ಯೂಸ್ ಅನ್ನು ತಯಾರಿಸಿ ಹರಡುತ್ತಿದ್ದಾರೆ. ತೀವ್ರವಾಗಿ ನೋಯಿಸಿರಬೇಕು... #JustAsking ಮೂಲಕ ನಾನು ಅವರನ್ನು ಬ್ಯುಸಿಯಾಗಿರಿಸಿದ್ದಕ್ಕೆ ಸಂತೋಷವಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.






