ನಿರ್ಮಾಪಕ ಎಂ.ಎನ್.ಕುಮಾರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ನಟ ಸುದೀಪ್

ಬೆಂಗಳೂರು, ಜು. 8: ಎಂಟು ವರ್ಷದ ಹಿಂದೆ ಕನ್ನಡ ಚಲನಚಿತ್ರ ನಟ ಸುದೀಪ್ ಅವರು ಹಣ ಪಡೆದು ಸಿನೆಮಾ ಮಾಡಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ನಿರ್ಮಾಪಕ ಎಂ.ಎನ್.ಕುಮಾರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಬಂದು ಆರೋಪ ಮಾಡಿದ್ದರು. ಈಗ ಸುದೀಪ್ ಅವರು ವಕೀಲರ ಮೂಲಕ ಎಂ.ಎನ್.ಕುಮಾರ್ ಗೆ ನೋಟೀಸ್ ನೀಡಿದ್ದಾರೆ.
ಎಂ.ಎನ್.ಕುಮಾರ್ ಮಾಡಿರುವ ಎಲ್ಲ ಆರೋಪಗಳು ಸುಳ್ಳು, ಆಧಾರರಹಿತವಾಗಿವೆ. ನನ್ನ ಮೇಲೆ ಕುಮಾರ್ ಅವರು ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆ ಮಾಡಿದ್ದಾರೆ. ಕುಮಾರ್ ಅವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಸಾಬೀತುಪಡಿಸಲಿ. ನೋಟೀಸ್ ಸಿಕ್ಕಿ ಮೂರು ದಿನಗಳ ಒಳಗೆ ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕು ಇಲ್ಲವಾದರೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಣ ಸಲ್ಲಿಸಲಿ ಎಂದು ನೋಟಿಸ್‍ನಲ್ಲಿವೆ.
ಕಿಚ್ಚ ಸುದೀಪ್ ಏನಂದ್ರು?: ಐಪಿಸಿ ಸೆಕ್ಷನ್ 499, 500 ಅಡಿಯಲ್ಲಿ ಎಂ.ಎನ್.ಕುಮಾರ್ ವಿರುದ್ಧ ದೂರು ದಾಖಲಾಗಿವೆ. ನಾನು ಎಂ.ಎನ್.ಕುಮಾರ್ ಅವರ ಕೆಲ ಸಿನೆಮಾಗಳಲ್ಲಿ ನಾನು ನಟಿಸಿದ್ದು, ಅದರ ಲಾಭ ಪಡೆದುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ ಎಂದು ಸುದೀಪ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಎಂ.ಎನ್.ಕುಮಾರ್ ಅವರು ಮಾಧ್ಯಮದ ಮುಂದೆ ಸುದೀಪ್ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಆ ನಂತರ ಸುದೀಪ್ ಅವರು ಟ್ವೀಟ್ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರು.





