ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ | ಪೊಲೀಸ್ ಆಯುಕ್ತರಿಗೆ ದೂರು ನೀಡಿದ ನಟಿ ರಮ್ಯಾ

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಟಿ ರಮ್ಯಾ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ನಟಿ ರಮ್ಯಾ, ‘ನಾನು ಯಾರಿಗೂ ಹೆದರುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ. ನನಗೇನೇ ಕೆಟ್ಟ ರೀತಿಯ ಪೋಸ್ಟ್ ಹಾಕಿ ಟ್ರೋಲ್ ಮಾಡುತ್ತಾರೆ. ಇನ್ನೂ ಸಾಮಾನ್ಯ ಹೆಣ್ಣು ಮಕ್ಕಳ ಗತಿಯೇನು? ರೇಣುಕಾಸ್ವಾಮಿ ಮಾಡಿರುವ ಮೆಸೇಜ್‌ಗೂ ಈಗ ಕೆಲವರು ಹಾಕುತ್ತಿರುವ ಪೋಸ್ಟ್ಗೂ ಯಾವುದೇ ವ್ಯತ್ಯಾಸವಿಲ್ಲ. ಇಂಥವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ದರ್ಶನ್ ಫ್ಯಾನ್ಸ್ ಮೆಸೇಜ್‌ಗೂ, ರೇಣುಕಾಸ್ವಾಮಿ ಮೆಸೇಜ್‌ಗೂ ವ್ಯತ್ಯಾಸ ಇಲ್ಲ :
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಲು ಆರಂಭಿಸಿದ್ದರು. ಶನಿವಾರ (ಜುಲೈ 26) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ರಮ್ಯಾ, 'ದರ್ಶನ್ ಅಭಿಮಾನಿಗಳಿಗೆ ನನ್ನ ಇನ್ಸ್ಟಾಗ್ರಾಮ್ಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಮೆಂಟ್‌ಗಳೇ ಸಾಕ್ಷಿ' ಎಂದಿದ್ದರು.
ಇದಕ್ಕೆ ದರ್ಶನ್ ಅಭಿಮಾನಿಗಳು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಹಂಚಿಕೊಂಡಿರುವ ರಮ್ಯಾ, 'ರೇಣುಕಸ್ವಾಮಿ ಮಾಡಿದ್ದ ಸಂದೇಶಕ್ಕೂ ದರ್ಶನ್ ಅಭಿಮಾನಿಗಳು ಮಾಡುವ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಇಂತಹ ಸ್ತ್ರೀದ್ವೇಷದ ಮನಸ್ಥಿತಿಯ ಕಾರಣದಿಂದಲೇ ಸಮಾಜದಲ್ಲಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ' ಎಂದು ಆಕ್ರೋಶ ಹೊರಹಾಕಿದ್ದಾರೆ.







