ಕರ್ನಾಟಕಕ್ಕೆ ಹೆಚ್ಚುವರಿ 1,122 ಸರಕಾರಿ ವೈದ್ಯಕೀಯ ಸೀಟ್ ಲಭ್ಯ : ಡಾ.ಶರಣಪ್ರಕಾಶ್ ಪಾಟೀಲ್

ಬೆಂಗಳೂರು : ರಾಜ್ಯ ಸರಕಾರದ ನಿರಂತರ ಪರಿಶ್ರಮದಿಂದ ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ ಹೆಚ್ಚುವರಿ 1,122 ವೈದ್ಯಕೀಯ ಸೀಟುಗಳು ಲಭ್ಯವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ಲಭಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಶನಿವಾರ ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ರಾಜ್ಯ ವೈದ್ಯಕೀಯ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಈ ಬಾರಿ ರಾಜ್ಯಕ್ಕೆ ದೊರೆತಿರುವ ಹೆಚ್ಚುವರಿ ಸೀಟುಗಳು ಕೊಪ್ಪಳ, ಗದಗ, ಚಾಮರಾಜನಗರ, ಕಾರವಾರ, ಕಾವೇರಿ ಸೇರಿ ಇತರೆ ಜಿಲ್ಲೆಗಳಿಗೆ ದೊರೆಯಲಿದೆ ಎಂದು ತಿಳಿಸಿದರು.
ಪದವಿಪೂರ್ವ ಸೀಟುಗಳಿಗೆ ಕೇಂದ್ರ ಸರಕಾರದಿಂದ 495 ಕೋಟಿ ರೂ. ಅನುದಾನ ಸಿಗಲಿದೆ. ಅದೇ ರೀತಿ ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿಗೆ 541 ಕೋಟಿ ರೂಪಾಯಿ ಅನುದಾನ ಸಿಗಲಿದೆ. ಈ ಸಂಬಂಧ ಕೇಂದ್ರ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮೇ 15ರಂದು ಅಂತಿಮ ಮುದ್ರೆ ಹಾಕಿದೆ. ಒಟ್ಟಾರೆಯಾಗಿ ರಾಜ್ಯಕ್ಕೆ 1090 ಕೋಟಿ ರೂಪಾಯಿ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಸ್ತುತ ಶೈಕ್ಷಣಿಕ ಸಾಲಿನಿಂದಲೇ ಒಂದು ಸಾವಿರ ವೈದ್ಯಕೀಯ ಸೀಟ್ ಒಂದು ರಾಜ್ಯಕ್ಕೆ ಸಿಕ್ಕಿರುವುದು ದಾಖಲೆಯಾಗಿದೆ. ಕರ್ನಾಟಕದ ಸಾಧನೆಗೆ ಇದು ಪೂರಕವಾದ ಸಾಕ್ಷಿಯಾಗಿದೆ. ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಅತಿ ಹೆಚ್ಚು ಸಾಧನೆ ಮಾಡಲು ಕರ್ನಾಟಕದಲ್ಲಿ ಈಗ ವಿಫುಲ ಅವಕಾಶಗಳು ದೊರೆತಂತಾಗುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮುಹಮ್ಮದ್ ಮೊಹ್ಸಿನ್ ಸೇರಿದಂತೆ ಪ್ರಮುಖರಿದ್ದರು.
ಸೀಟುಗಳ ಹೆಚ್ಚಳ: ‘11 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 550 ಎಂಬಿಬಿಎಸ್ ಸೀಟ್‍ಗಳನ್ನು ಹಾಗೂ 23 ಶಿಕ್ಷಣ ಸಂಸ್ಥೆಗಳಲ್ಲಿ 572 ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‍ಗಳ ಸೀಟ್‍ಗಳ ಹೆಚ್ಚಳವಾಗಿದೆ. ಖಾಸಗಿ ಹಾಗೂ ಇತರ ಸಂಸ್ಥೆಗಳ ಅಧೀನದಲ್ಲಿರುವ ಕಾಲೇಜುಗಳಲ್ಲಿ 450 ಸೀಟ್‍ಗಳನ್ನು ಹೆಚ್ಚಿಸಲಾಗಿದ್ದು, ಈ ಮೊದಲಿದ್ದ 3,800 ಸೀಟ್‍ಗಳನ್ನು ಒಳಗೊಂಡಂತೆ ಒಟ್ಟು 4,250 ವೈದ್ಯಕೀಯ ಸೀಟ್‍ಗಳು ಲಭ್ಯವಾಗುತ್ತಿದೆ’
-ಡಾ.ಶರಣಪ್ರಕಾಶ್ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವ






