1ನೇ ತರಗತಿ ಸೇರ್ಪಡೆಗೆ ಮಕ್ಕಳ ವಯೋಮಿತಿ ಸಡಿಲ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ಮಧು ಬಂಗಾರಪ್ಪ
ಬೆಂಗಳೂರು: ಶಾಲಾ ಮಕ್ಕಳ ದಾಖಲಾತಿ ವಯೋಮಿತಿ ವಿಚಾರದಲ್ಲಿ ಪೋಷಕರ ಒತ್ತಡಕ್ಕೆ ಶಿಕ್ಷಣ ಇಲಾಖೆ ಮಣಿದಿದ್ದು, 1ನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ಕರ್ನಾಟಕ ಶಿಕ್ಷಣ ಇಲಾಖೆ ಸಡಿಲಗೊಳಿಸಿದೆ.
ರಾಜ್ಯದಲ್ಲಿ 1ನೇ ತರಗತಿಗೆ ಮಕ್ಕಳ ಸೇರ್ಪಡೆಗೆ ಇರುವ ವಯೋಮಿತಿಯನ್ನು ರಾಜ್ಯ ಸರ್ಕಾರ ತುಸು ಸಡಿಲಗೊಳಿಸಿದ್ದು, ಮಕ್ಕಳಿಗೆ 5 ವರ್ಷ 5 ತಿಂಗಳು ಆಗಿದ್ದರೂ ಅವರು ಶಾಲೆಗೆ ದಾಖಲಾಗಲು ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಇದಕ್ಕೂ ಮುನ್ನ ರಾಜ್ಯ ಪಠ್ಯಕ್ರಮದಲ್ಲಿ 1ನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು 6 ವರ್ಷ ಆಗಿರಬೇಕಾಗಿರುವುದು ಕಡ್ಡಾಯವಾಗಿತ್ತು. ಎಸ್ಇಪಿ ವರದಿ ಆಧಾರದ ಮೇಲಿನ ಕಡ್ಡಾಯ 6 ವರ್ಷ ವಯೋಮಿತಿಯನ್ನು ಸಡಿಲಿಸಲಾಗಿದೆ. ಆದರೆ, ಒಂದನೇ ತರಗತಿ ಸೇರ್ಪಡೆಗೆ ಯುಕೆಜಿ ಆಗಿರಬೇಕು. ಆದರೆ, ಇದು ಈ ವರ್ಷಕ್ಕೆ ಮಾತ್ರ ಅನ್ವಯ. ಮುಂದಿನ ವರ್ಷದಿಂದ ಕಡ್ಡಾಯ ವಯೋಮಿತಿ 6 ವರ್ಷವೇ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಎಲ್ಕೆಜಿ, ಯುಕೆಜಿ ಆಗಿದ್ದರೆ ಮಾತ್ರ 1ನೇ ತರಗತಿಗೆ ಪ್ರವೇಶ. ಮಕ್ಕಳಿಗೆ 5 ವರ್ಷ 5 ತಿಂಗಳಾಗಿರಬೇಕು. ಪೋಷಕರ ಒತ್ತಾಯದ ಮೇರೆಗೆ ಈ ವರ್ಷ ಮಾತ್ರ ಅವಕಾಶ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂದು ಅವರು ತಿಳಿಸಿದರು.