ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್

ಹೊಸದಿಲ್ಲಿ : ಜಮ್ಮು-ಕಾಶ್ಮೀರದ ಶ್ರೀನಗರದ ಶೇರ್-ಇ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ಜನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.
ಪಾಕಿಸ್ತಾನದ ದಾಳಿ ನಡುವೆ ಉದ್ವಿಗ್ನ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಜಮ್ಮುವಿನಿಂದ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನವು ಭಾರತದ ಮೇಲೆ ದಾಳಿ ನಡೆಸುತ್ತಿದ್ದು, ಅದಕ್ಕೆ ಪ್ರತ್ಯುತ್ತರ ನೀಡಲಾಗುತ್ತಿದೆ. ಅಲ್ಲದೆ, ಕಣಿವೆ ರಾಜ್ಯದಲ್ಲಿನ ಎಲ್ಲರ ಜೀವ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೂಚನೆಯಂತೆ ವಿದ್ಯಾರ್ಥಿಗಳ ತೆರವಿಗೆ ಸರ್ವ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಗೆ ನೆರವಾದ ಎಲ್ಲವರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಎಲ್ಲ ವಿದ್ಯಾರ್ಥಿಗಳು ಈಗಾಗಲೇ ದಿಲ್ಲಿ ತಲುಪಿದ್ದು, ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದ ವಿದ್ಯಾರ್ಥಿ ಹರ್ಷಿತ್ ಪೋಷಕರು ಜಮ್ಮುವಿನಲ್ಲಿ ಸಿಲುಕಿರುವ ತಮ್ಮ ಪುತ್ರನನ್ನು ರಕ್ಷಣೆ ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಮನವಿ ಮಾಡಿದ್ದರು. ಕೂಡಲೇ ಈ ವಿಷಯವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಗಮನಕ್ಕೆ ತಂದು ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರಕ್ಕೆ ಕೋರಿದ್ದರು.
ಶನಿವಾರ ಶ್ರೀನಗರದಿಂದ ಭದ್ರತೆಯ ನಡುವೆ ಬಸ್‍ನಲ್ಲಿ ಜಮ್ಮುವಿಗೆ ಪ್ರಯಾಣಿಸಿದ್ದ ವಿದ್ಯಾರ್ಥಿಗಳು ರವಿವಾರ ಮಧ್ಯಾಹ್ನದ ಹೊತ್ತಿಗೆ ರೈಲಿನಲ್ಲಿ ದಿಲ್ಲಿ ತಲುಪಿದರು.
ವಿದ್ಯಾರ್ಥಿಗಳು ದಿಲ್ಲಿ ತಲುಪಿದ ನಂತರ ಅವರ ಉಸ್ತುವಾರಿಯನ್ನು ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಅಧಿಕಾರಿಗಳೇ ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿ ಅವರ ಮನೆಗಳನ್ನು ತಲುಪುವವರೆಗೂ ನಾವು ಎಚ್ಚರಿಕೆ ವಹಿಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
‘ಇಡೀ ದೇಶವು ಸವಾಲಿನ ಪರಿಸ್ಥಿತಿಯಲ್ಲಿ ಇರುವಾಗ ಪ್ರಧಾನಿ ಮೋದಿ ಸ್ಪಷ್ಟ ಮಾರ್ಗದರ್ಶನದಿಂದ ಮಾತ್ರ ಇದೆಲ್ಲಾ ಸಾಧ್ಯವಾಗಿದೆ. ಜಮ್ಮು-ಕಾಶ್ಮೀರದಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರಕಾರದ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಮುಖ್ಯವಾಗಿ ಭದ್ರತಾ ಸಂಸ್ಥೆಗಳು, ರೈಲ್ವೆ ಸಿಬ್ಬಂದಿ ಮತ್ತು ಸಚಿವಾಲಯದ ಅಧಿಕಾರಿಗಳನ್ನು ನಾನು ಶ್ಲಾಘಿಸುತ್ತೇನೆ. ನಮ್ಮ ಜನರ, ವಿಶೇಷವಾಗಿ ದೂರದ ಪ್ರದೇಶಗಳ ವಿದ್ಯಾರ್ಥಿಗಳ ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
‘ನನ್ನದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮ. ನಾವು ಶ್ರೀನಗರದಲ್ಲಿದ್ದ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದಾಗ ತೀವ್ರ ಅನಿಶ್ಚಿತ ಮತ್ತು ಆತಂಕಕ್ಕೊಳಗಾಗಿದ್ದೆವು. ಆದರೆ ಭಾರತ ಸರಕಾರದ ತ್ವರಿತ ನೆರವಿನಿಂದ ನಾವು ಅಪಾಯದಿಂದ ಪಾರಾದೆವು. ಪ್ರಧಾನಿ ಮೋದಿಯವರ ಆದೇಶದಿಂದ ನಾವು ಸುರಕ್ಷಿತವಾಗಿ ವಾಪಸ್ ಆಗಿದ್ದೇವೆ. ನಮ್ಮನ್ನು ಯೋಗಕ್ಷೇಮ, ಸುರಕ್ಷತೆಯ ಬಗ್ಗೆ ನಿರಂತರವಾಗಿ ನಿಗಾ ವಹಿಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆ ಅರ್ಪಿಸುತ್ತೇವೆ. ನಿಖಿಲ್ ಕುಮಾರಸ್ವಾಮಿ ನಮ್ಮ ಸುರಕ್ಷಿತ ಪ್ರಯಾಣವನ್ನು ನಿಕಟವಾಗಿ ಗಮನಿಸುತ್ತಿದ್ದರು ಮತ್ತು ಅದು ನಮಗೆಲ್ಲರಿಗೂ ಬಹಳಷ್ಟು ಅನುಕೂಲವಾಯಿತು’
-ಹರ್ಷಿತ್, ಶೇರ್-ಇ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ವಿದ್ಯಾರ್ಥಿ
‘ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತಿದ್ದಕ್ಕಾಗಿ ನಮ್ಮ ಪ್ರಧಾನಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಅವರು ಗಂಭೀರವಾಗಿ ಪರಿಗಣಿಸಿದ್ದು ನನಗೆ ಸಂತೋಷ ಉಂಟು ಮಾಡಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ವೈಯಕ್ತಿಕ ಕಾಳಜಿ, ನೆರವು ಹಾಗೂ ನಿಖಿಲ್ ಕುಮಾರಸ್ವಾಮಿ ಸಹಾಯದಿಂದ ನಾವು ಸುರಕ್ಷಿತವಾಗಿ ನಮ್ಮ ನಮ್ಮ ಮನೆಗಳಿಗೆ ತಲುಪುತ್ತಿದ್ದೇವೆ’
-ಭಾಗ್ಯಶ್ರೀ ಪ್ರಸಾದ್ ಶೇರ್-ಇ-ಕಾಶ್ಮೀರ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ವಿದ್ಯಾರ್ಥಿ







