ಪ್ರಸಕ್ತ ಸಾಲಿನಿಂದಲೇ ಸರಕಾರಿ ಶಾಲೆಗಳಲ್ಲಿ ಎಐ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರಾಜ್ಯದ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಎಐ ತಂತ್ರಜ್ಞಾನ ಮೂಲಕ ದಾಖಲಿಸುವ ವ್ಯವಸ್ಥೆಯನ್ನು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿ ಮಾಡುವಂತೆ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.
ಮೊಬೈಲ್ ಬೇಸ್ಡ್ ಎಐ-ಡ್ರೈವನ್ ಫೇಸಿಯಲ್ ರೆಕಾಗ್ನೈನೇಷನ್ ಅಟೆಂಡನ್ಸ್ ಸಿಸ್ಟಮ್ ತಂತ್ರಜ್ಞಾನದ ಮೂಲಕ ಶಾಲಾ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲಾಗುವುದು. ಈ ಕಾರ್ಯಕ್ರಮದ ಬಗ್ಗೆ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದು, ಅದರಂತೆ ನಿರಂತರ ಹೆಸರಿನಲ್ಲಿ ಕಾರ್ಯಕ್ರಮ ಅನುಷ್ಠಾನವಾಗಿದೆ.
ರಾಜ್ಯದ 52,686 ಶಾಲೆಗಳಲ್ಲಿ ಎಐ ತಂತ್ರಜ್ಞಾನ ಆಧಾರಿತ ಹಾಜರಾತಿ ವ್ಯವಸ್ಥೆ ಬರಲಿದೆ. ಇದರಲ್ಲಿ 46,460 ಸರಕಾರಿ ಶಾಲೆಗಳು 6,226 ಅನುದಾನಿತ ಶಾಲೆಗಳು ಹಾಗೂ ಒಟ್ಟು 52,55,738 ವಿದ್ಯಾರ್ಥಿಗಳ ಹಾಜರಾತಿ ಆನ್ಲೈನ್ ಮೂಲ ಸೆರೆ ಹಿಡಿಯಬಹುದು. ಇದರಲ್ಲಿ 40,74,525 ಸರಕಾರಿ ಶಾಲಾ ಮಕ್ಕಳು, 11,81,213 ಅನುದಾನಿತ ಶಾಲಾ ಮಕ್ಕಳಿಗೆ ಹೊಸ ಹಾಜರಾತಿ ವ್ಯವಸ್ಥೆ ಅನ್ವಯ ಆಗಲಿದೆ.





