ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣ: ಐಶ್ವರ್ಯ ಗೌಡ ದಂಪತಿಯ 3.98 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ಐಶ್ವರ್ಯಗೌಡ
ಬೆಂಗಳೂರು: ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಸಹೋದರಿ ಸೋಗಿನಲ್ಲಿ ಚಿನ್ನದ ವ್ಯಾಪಾರಿಗಳು ಹಾಗೂ ಇನ್ನಿತರ ವ್ಯಕ್ತಿಗಳಿಗೆ ವಂಚಿಸಿದ್ದ ಆರೋಪಿತೆ ಐಶ್ವರ್ಯಗೌಡ ವಿರುದ್ದ ಬಹುಕೋಟಿ ವಂಚನೆ ಆರೋಪದಡಿ, ಅಕ್ರಮ ಹಣ ವರ್ಗಾವಣೆಯಡಿ(ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಈ.ಡಿ.) ಈ ಸಂಬಂಧ ಆರೋಪಿತೆಗೆ ಸಂಬಂಧಿಸಿದ ಒಟ್ಟು 3.98 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಜೂ.19 ರಂದು ಪಿಎಂಎಲ್ನಡಿ ಐಶ್ವರ್ಯಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಈ.ಡಿ. ತನ್ನ ತನಿಖೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿತ್ತು. ವಂಚನೆ ಕೃತ್ಯಕ್ಕೆ ಪತಿ ಹರೀಶ್ ಭಾಗಿಯಾಗಿರುವುದು ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಅಕ್ರಮವಾಗಿ ಸಂಪಾದಿಸಿದ್ದ 2.01 ಕೋಟಿ ರೂ. ಮೌಲ್ಯದ ಫ್ಲ್ಯಾಟ್, ನಿವೇಶನಗಳು ಹಾಗೂ ನಿರ್ಮಾಣವಾಗಿರುವ ಕಟ್ಟಡ ಹಾಗೂ 1.97 ಕೋಟಿ ರೂ. ಮೊತ್ತದ ಹಣ ಹಾಗೂ ವಾಹನಗಳು ಒಳಗೊಂಡಂತೆ ಒಟ್ಟು 3.98 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟನೆಯಲ್ಲಿ ಈ.ಡಿ.ತಿಳಿಸಿದೆ.
ವಂಚನೆ ಸಂಬಂಧ ಬೆಂಗಳೂರು ನಗರ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಆರಕ್ಕಿಂತ ಹೆಚ್ಚು ಪ್ರಕರಣ ದಾಖಲಾಗಿದ್ದವು. ಪೂರ್ವಸಂಚು ರೂಪಿಸಿ ಚಿನ್ನದ ವ್ಯಾಪಾರಿಗಳು ಹಾಗೂ ಇನ್ನಿತರರಿಂದ ಹೆಚ್ಚಿನ ಹಣದ ಆಮಿಷವೊಡ್ಡಿ ಕೋಟ್ಯಂತರ ರೂ. ನಗದು ಹಾಗೂ ಚಿನ್ನಾಭರಣ ಪಡೆಯುತ್ತಿದ್ದರು. ಬಳಿಕ ಹಣ ನೀಡುವಂತೆ ದೂರುದಾರರು ಪ್ರಶ್ನಿಸಿದಾಗ ರಾಜಕೀಯ ನಾಯಕರ ಪ್ರಭಾವ ಬಳಸಿ ಐಶ್ವರ್ಯಗೌಡ ದಂಪತಿ ಬೆದರಿಕೆ ಹಾಕುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಈ.ಡಿ. ಹೇಳಿದೆ.
ಅಕ್ರಮವಾಗಿ ಬಹುಕೋಟಿ ವರ್ಗಾವಣೆ ಕುರಿತಂತೆ ಐಶ್ವರ್ಯಗೌಡಗೆ ಸಂಬಂಧಿಸಿದ ಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಈ.ಡಿ. ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ವಂಚನೆ ಕೃತ್ಯಕ್ಕೆ ಸಂಬಂಧಿಸಿದ ಪೂರಕ ದಾಖಲಾತಿಗಳು, ಡಿಜಿಟಲ್ ಸಾಕ್ಷ್ಯಾಧಾರಗಳು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ನ್ಯಾಯಾಲಯವು ಐಶ್ವರ್ಯಗೌಡ ಅವರಿಗೆ ಜೂ.18ರಂದು 1ನೇ ಸಿಸಿಎಚ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿತ್ತು.
ಐಶ್ವರ್ಯಗೌಡ ಅವರು ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಜೊತೆ ಪರಿಚಯವಿದೆ ಎಂದು ನಂಬಿ ಕೆಲವರು ಹಣ ನೀಡಿ ವಂಚನೆಗೊಳಗಾಗಿದ್ದಾರೆ. ಒಮ್ಮೆ ಕನ್ನಡ ರಾಜೋತ್ಸವಕ್ಕೆ ಮಾತ್ರ ಕರೆದಿದ್ದು, ನಾನು ಹೋಗಿದ್ದೆ. ಆದರೆ, ಆಕೆಯೊಂದಿಗೆ ನೇರ ಮಾತಿನ ವ್ಯವಹಾರ ಆಗಿರಲಿಲ್ಲ.
-ಡಿ.ಕೆ.ಸುರೇಶ್, ಮಾಜಿ ಸಂಸದ