" ದ್ವಂದ್ವ ಬೇಡ, ಇಸ್ರೇಲ್ ಕಂಪೆನಿಗಳ ಜೊತೆ ಸಂಬಂಧ ಕಡಿದುಕೊಳ್ಳಲು ಕರ್ನಾಟಕ ಸರಕಾರಕ್ಕೆ ಹೇಳಿ "

ಪ್ರಿಯಾಂಕಾ ಗಾಂಧಿ |PC : PTI
ಬೆಂಗಳೂರು: ಗಾಝಾದಲ್ಲಿ ಅಲ್ ಜಝೀರಾ ವರದಿಗಾರರ ಹತ್ಯೆಯನ್ನು ಖಂಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆಯನ್ನು ಸ್ವಾಗತಿಸಿರುವ ʼಬೆಂಗಳೂರು ಫಾರ್ ಜಸ್ಟಿಸ್ ಆ್ಯಂಡ್ ಪೀಸ್ʼ (Bengaluru for Justice and Peace) ಮಾನವ ಹಕ್ಕುಗಳ ಸಂಘಟನೆ, ಇಸ್ರೇಲ್ನೊಂದಿಗೆ ಶಸ್ತ್ರಾಸ್ತ್ರ ವ್ಯವಹಾರಗಳ ಒಪ್ಪಂದವನ್ನು ನಿಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಬೇಕು ಎಂದು ಪ್ರಿಯಾಂಕಾ ಗಾಂಧಿ ಅವರಿಗೆ ಪತ್ರದಲ್ಲಿ ಮನವಿ ಮಾಡಿದೆ.
ʼಬೆಂಗಳೂರು ಫಾರ್ ಜಸ್ಟಿಸ್ ಆ್ಯಂಡ್ ಪೀಸ್ʼ ಮಾನವ ಹಕ್ಕುಗಳ ಸಂಘಟನೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಬರೆದಿರುವ ಪತ್ರದ ವಿಸ್ತೃತ ಸಾರಾಂಶ ಈ ಕೆಳಗಿನಂತಿದೆ:
ಗಾಝಾದ ಅಲ್ ಶಿಫಾ ಬಳಿಯ ಪತ್ರಕರ್ತರ ಶಿಬಿರದ ಮೇಲೆ ವಾಯು ದಾಳಿ ನಡೆಸುವ ಮೂಲಕ, ಐವರು ಅಲ್ ಜಝೀರಾ ಸುದ್ದಿ ಸಂಸ್ಥೆಯ ಪತ್ರಕರ್ತರನ್ನು ಹತ್ಯೆಗೈದಿರುವುದನ್ನು ಖಂಡಿಸಿ ನೀವು ನೀಡಿರುವ ಹೇಳಿಕೆಯನ್ನು ʼಬೆಂಗಳೂರು ಫಾರ್ ಜಸ್ಟಿಸ್ ಆ್ಯಂಡ್ ಪೀಸ್ʼ ಸಂಘಟನೆಯ ಸದಸ್ಯರಾದ ನಾವು ಸ್ವಾಗತಿಸುತ್ತೇವೆ. ನೀವು ಈ ಕೃತ್ಯವನ್ನು ಹೇಯ ಎಂದು ಬಣ್ಣಿಸಿರುವುದು ಇಸ್ರೇಲ್ ದೇಶ ಎಸಗುತ್ತಿರುವ ಜನಾಂಗೀಯ ಹತ್ಯೆಗೆ ಹಾಗೂ ನೂರಾರು ಮಂದಿ ಹಸಿವಿನಿಂದ ಪ್ರಾಣ ಕಳೆದುಕೊಳ್ಳುವಂತೆ ಮಾಡಿರುವುದಕ್ಕೆ ಪುರಾವೆಯಾಗಿದೆ. ಇದನ್ನು ಭಾರತ ಸರಕಾರ ಇನ್ನೂ ಗುರುತಿಸಬೇಕಿದೆ ಎಂದು ಹೇಳಿದರು.
ನೀವು ನೀಡಿರುವ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ, ಈ ಕುರಿತು ಕಾಂಗ್ರೆಸ್ ಸ್ಥಿರ ಹಾಗೂ ಪ್ರಜ್ಞಾಪೂರ್ವಕ ನಿಲುವನ್ನು ಅಳವಡಿಸಿಕೊಳ್ಳಬೇಕು. ಇದು ಮಾತಿಗೆ ಮಾತ್ರ ಸೀಮಿತವಾಗಿರಬಾರದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಸದಸ್ಯರು ಇಸ್ರೇಲ್ನೊಂದಿಗೆ ಕೇವಲ ಬಲವಾದ ಬಾಂಧವ್ಯಗಳನ್ನು ಮಾತ್ರ ಹೊಂದಿಲ್ಲ, ಬದಲಿಗೆ, ಇಸ್ರೇಲ್ ನ ಜನಾಂಗೀಯ ಹತ್ಯೆ ಮುಂದುವರಿದಂತೆಲ್ಲ ಅವರ ಸಂಬಂಧಗಳು ಮತ್ತಷ್ಟು ಆಳವಾಗುತ್ತಿದೆ ಎಂಬುದಕ್ಕೆ ಹೇರಳ ನಿದರ್ಶನಗಳಿವೆ. ಕರ್ನಾಟಕದಲ್ಲಿ ಸರಕಾರ ರಚಿಸಿರುವ ಕಾಂಗ್ರೆಸ್ ಈ ಮಾತಿಗೆ ನಿದರ್ಶನವಾಗಿದೆ. ನಾಚಿಕೆಗೇಡಿನ ನಡೆಯೊಂದರಲ್ಲಿ, ಕಳೆದ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನ ಐಐಎಸ್ಸಿಯಲ್ಲಿ ಮೈಸೂರ್ ಲ್ಯಾನ್ಸರ್ಸ್ ಹೆರಿಟೇಜ್ ಫೌಂಡೇಷನ್ ಆಯೋಜಿಸಿದ್ದ ' ಹೈಫಾ ಸ್ಮಾರಕ ಉಪನ್ಯಾಸ' ಕಾರ್ಯಕ್ರಮದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಇಸ್ರೇಲ್ ಅಧಿಕಾರಿಗಳೂ ಉಪಸ್ಥಿತರಿದ್ದರು ಹಾಗೂ ಇಸ್ರೇಲ್ ಭಾವುಟವನ್ನು ಕೂಡ ಹಾರಿಸಲಾಗಿತ್ತು.
ಕರ್ನಾಟಕ ಕಾಂಗ್ರೆಸ್ ಕಳೆದ ಎರಡು ವರ್ಷಗಳಿಂದ ಇಸ್ರೇಲ್ ಸರಕಾರ ಹಾಗೂ ಜನಾಂಗೀಯ ಹತ್ಯೆಗೆ ಸಂಬಂಧ ಹೊಂದಿರುವ ಖಾಸಗಿ ಕಂಪೆನಿಗಳೊಂದಿಗೆ ಸಕ್ರಿಯವಾಗಿ ತನ್ನ ಸಹಭಾಗಿತ್ವವನ್ನು ಹೊಂದಿದೆ. ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಸ್ರೇಲ್ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಪೋಟೊಗಳನ್ನು ಅಪ್ಲೋಡ್ ಮಾಡುತ್ತಾರೆ. ಜಂಟಿ ಉದ್ಯಮ ಕಂಪೆನಿಗಳ ಜೊತೆಗಿನ ವ್ಯವಹಾರದಲ್ಲಿನ ಸಹಯೋಗಗಳನ್ನು ಘೋಷಿಸುತ್ತಾರೆ. ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಐಐಎಸ್ಸಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆಯಲ್ಲಿ ಭಾಗವಹಿಸಿ, ಅದರ ಆಯೋಜನೆಗೆ ಬೆಂಬಲ ನೀಡಿದಾಗಲೇ ನಾವು ಕಾಂಗ್ರೆಸ್ಗೆ ಪತ್ರ ಬರೆದಿದ್ದೆವು ಎಂದು ಹೇಳಲಾಗಿದೆ.
ಬೆಂಗಳೂರು ಮೂಲದ 9 ಕಂಪೆನಿಗಳು ಇಸ್ರೇಲ್ ಗೆ ಶಸ್ತ್ರಾಸ್ತ್ರಗಳು ಹಾಗೂ ಶಸ್ತ್ರಾಸ್ತ್ರ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿರುವುದರ ಬಗ್ಗೆ ಪಟ್ಟಿಯನ್ನು ಸಂಸತ್ ಸದಸ್ಯರ ಗಮನಕ್ಕೆ ತಂದಿದ್ದೇವೆ. ಈ ಪೈಕಿ ಏಸ್ ಇನೋಟೆಕ್ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ (AIMPL), ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ((ADPTL), ಆಲ್ಫಾ-ಎಲ್ಸೆಕ್ ಏರೋಸ್ಪೇಸ್ ಸಿಸ್ಟಮ್ಸ್, ಆಂಫೇನಾಲ್ ಇಂಟರ್ಕನೆಕ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಆಂಫೆಟ್ರಾನಿಕ್ಸ್ ಆಫ್ಸೆಟ್ ಇಂಟರ್ಕನೆಕ್ಟ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಡಿಸಿಎಕ್ಸ್ ಸಿಸ್ಟಮ್ಸ್ ಲಿಮಿಟೆಡ್, ಡೆಫ್ಸಿಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಇಂಡೋ-ಎಂಐಎಂ ಪ್ರೈವೇಟ್ ಲಿಮಿಟೆಡ್, ಸಾಸ್ಮೋಸ್ ಹೆಟ್ ಟೆಕ್ನಾಲಜೀಸ್ ಲಿಮಿಟೆಡ್ ಹಾಗೂ ವೇವ್ ಮೆಕಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಗಳು ಸೇರಿವೆ.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮೊದಲನೆಯದಾಗಿ, ಭಾರತದಿಂದ ಇಸ್ರೇಲ್ ಗೆ ಶಸ್ತ್ರಾಸ್ತ್ರ ರಫ್ತು, ಶಸ್ತ್ರಾಸ್ತ್ರ ಬಿಡಿಭಾಗಗಳು ಹಾಗೂ ಸಾಗಣೆಯ ಮೇಲೆ ನಿಷೇಧ ಹಾಗೂ ಮಧ್ಯವರ್ತಿ ದೇಶಗಳು ಹಾಗೂ ಕಂಪೆನಿಗಳ ಅವಳಿ ಬಳಕೆ ಸಾಧನಗಳು ಸೇರಿದಂತೆ ಇಸ್ರೇಲ್ ಮೇಲೆ ಸಂಪೂರ್ಣ ಶಸ್ತ್ರಾಸ್ತ್ರ ನಿರ್ಬಂಧ ಹೇರಬೇಕು.
ಎರಡನೆಯದಾಗಿ, ಇಸ್ರೇಲ್ ಕಂಪೆನಿಗಳೊಂದಿಗೆ ಸಂಬಂಧ ಹೊಂದಿರುವ ಸರಕಾರಿ ಗುತ್ತಿಗೆ, ಅನುದಾನಗಳು ಮತ್ತು ಉತ್ಪಾದನಾ ಸಂಬಂಧಿತ ಭತ್ಯೆ ಯೋಜನೆಗಳನ್ನು ಅಮಾನತುಗೊಳಿಸಲು ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಬೆಂಗಳೂರು ಫಾರ್ ಜಸ್ಟಿಸ್ ಆ್ಯಂಡ್ ಪೀಸ್ ಸಂಘಟನೆ ಮನವಿ ಮಾಡಿದೆ.







