ಗೋವಾದಲ್ಲಿ ತನ್ನ ನಾಲ್ಕು ವರ್ಷದ ಪುತ್ರನನ್ನು ಹತ್ಯೆಗೈದ ಬೆಂಗಳೂರು ಮೂಲದ ಸಿಇಒ ಸುಚನಾ ಸೇಠ್ ಯಾರು?

ಬೆಂಗಳೂರು: ಗೋವಾ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ತನ್ನ ನಾಲ್ಕು ವರ್ಷದ ಪುತ್ರನನ್ನು ಹತ್ಯೆಗೈದ ಬೆಂಗಳೂರು ಮೂಲದ ಕೃತಕ ಬುದ್ಧಿಮತ್ತೆ (AI) ನವೋದ್ಯಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಇಒ ಸುಚನಾ ಸೇಠ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ತನ್ನ ಪುತ್ರನ ಮೃತದೇಹವನ್ನು ಚೀಲವೊಂದರಲ್ಲಿ ಸುತ್ತಿಟ್ಟು ಕ್ಯಾಬ್ ನಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಳು ಎಂದು ಹೇಳಿರುವ ಪೊಲೀಸರು, ತನ್ನ ಪತಿಯಿಂದ ದೂರವಾಗಿರುವುದು ಈ ಹತ್ಯೆಯ ಹಿಂದಿನ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
ಶನಿವಾರ ಉತ್ತರ ಗೋವಾದ ವೈಭವೋಪೇತ ಕಾಂಡೋಲಿಮ್ ಅಪಾರ್ಟ್ ಮೆಂಟ್ ಗೆ ಬಂದಿದ್ದ ಸುಚನಾ ಸೇಠ್, ಸೋಮವಾರ ಬೆಳಗ್ಗೆ ಅಲ್ಲಿಂದ ನಿರ್ಗಮಿಸಿದ್ದರು.
ಸುಚನಾ ಸೇಟ್ ಯಾರು?
The Mindful AI Labನ ಸಂಸ್ಥಾಪಕಿ ಸಿಇಒ ಸುಚನಾ ಸೇಠ್, ಕಳೆದ ನಾಲ್ಕು ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಈ ಸಂಸ್ಥೆಯು ಕೃತಕ ಬುದ್ಧಿಮತ್ತೆಯ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿತ್ತು.
ಸುಚನಾ ಸೇಟ್ ಬರ್ಕ್ ಮನ್ ಕ್ಲೈನ್ ಸೆಂಟರ್ ನ ಅಂಗಸಂಸ್ಥೆಯಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಅಲ್ಲಿ ಅವರು ಕೃತಕ ಬುದ್ಧಿಮತ್ತೆ ನಿರ್ವಹಣೆಯ ಮೌಲ್ಯಗಳಿಗೆ ಕೊಡುಗೆ ನೀಡಿದ್ದರು. ಇದಲ್ಲದೆ ಮೆಸ್ಸಾಚುಸ್ಸೆಟ್ಸ್ ನ ಬೋಸ್ಟನ್ ನಲ್ಲಿ ಜವಾಬ್ದಾರಿಯುತ ಯಂತ್ರ ಕಲಿಕೆಯನ್ನೂ ನಡೆಸಿದ್ದರು.
The Minduful AI Lab ಅನ್ನು ಸ್ಥಾಪಿಸುವುದಕ್ಕೂ ಮುನ್ನ ಬೆಂಗಳೂರಿನ ಬೂಮರಾಂಗ್ ಕಾಮರ್ಸ್ ಸಂಸ್ಥೆಯಲ್ಲಿ ಹಿರಿಯ ದತ್ತಾಂಶ ಎಂಜಿನಿಯರ್ ಆಗಿದ್ದರು ಸುಚನಾ ಸೇಠ್.
ಆಕೆ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಖಗೋಳ ಭೌತವಿಜ್ಞಾನದೊಂದಿಗೆ ಪ್ಲಾಸ್ಮಾ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
2020ರಲ್ಲಿ ತನ್ನ ಪತಿಯಿಂದ ಸುಚನಾ ಸೇಟ್ ವಿಚ್ಛೇದನ ಪಡೆದಿದ್ದರು. ಹೀಗಿದ್ದೂ ಪ್ರತಿ ರವಿವಾರ ತಮ್ಮ ಪುತ್ರನನ್ನು ನೋಡಲು ಸುಚನಾ ಸೇಠ್ ರ ಪತಿಗೆ ನ್ಯಾಯಾಲಯವು ಅನುಮತಿ ನೀಡಿತ್ತು.
ಒಂದು ವೇಳೆ ತನ್ನ ಪತಿಯು ತನ್ನ ಪುತ್ರನನ್ನು ಭೇಟಿಯಾಗಲು ಪ್ರಾರಂಭಿಸಿದರೆ, ಆತನ ಮೇಲೆ ಅವರು ಹಿಡಿತ ಸಾಧಿಸಬಹುದು ಎಂದು ಸುಚನಾ ಸೇಟ್ ಭಯಭೀತರಾಗಿದ್ದರು ಎಂದು ಹೇಳಲಾಗಿದೆ. ಹೀಗಾಗಿ ತನ್ನ ಪತಿಯು ಪುತ್ರನನ್ನು ಭೇಟಿಯಾಗಲು ಬರುವುದಕ್ಕೂ ಮುಂಚಿತವಾಗಿಯೇ ತನ್ನ ಪುತ್ರನನ್ನು ಹತ್ಯೆಗೈಯಲು ಸುಚನಾ ಸೇಟ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.







