ಫೆ.12ಕ್ಕೆ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ

ಬೆಂಗಳೂರು, ಫೆ. 4: ನಾಲ್ಕು ಕಾರ್ಮಿಕ ಕಾನೂನು ರದ್ದುಗೊಳಿಸಿ ರಾಜ್ಯ ಸರಕಾರ ತಂದಿರುವ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕೆಂದು ಆಗ್ರಹಿಸಿ ಫೆ.12ರಂದು ರಾಜ್ಯದಲ್ಲಿ ಕೇಂದ್ರ ಮತ್ತು ಸ್ವತಂತ್ರ ಕಾರ್ಮಿಕ, ರೈತ, ಕೂಲಿಕಾರ, ದಲಿತ, ಮಹಿಳಾ ಹಾಗೂ ವಿದ್ಯಾರ್ಥಿ-ಯುವಜನ ಸಂಘಟನೆಗಳು ಕೆಲಸ ಸ್ಥಗಿತಗೊಳಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಂಡಿವೆ.
ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಎಚ್.ಆರ್.ಬಸವರಾಜು, ಎಸ್. ವರಲಕ್ಷ್ಮಿ, ನೂರ್ ಶ್ರೀಧರ್, ಜಿ.ಆರ್.ಶಿವಶಂಕರ್, ಕೆ.ವಿ.ಭಟ್, ಶಾಮಣ್ಣರೆಡ್ಡಿ, ಟಿ.ಯಶವಂತ, ಚಂದ್ರಪ್ಪ ಹೊಸ್ಕೆರಾ, ಎಚ್‍ಎಂಎಸ್ ರವಿ, ಅಪ್ಪಣ್ಣ, ಚಾಯಾ, ಕಾಳಪ್ಪ, ವೀರಸಂಗಯ್ಯ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ವ್ಯಾಪಾರ ಸುಲಭ ಗೊಳಿಸÀಲು, ಯೂನಿಯನ್ ಮುಕ್ತ ವಾತಾವರಣ ನಿರ್ಮಿಸಲಿಕ್ಕಾಗಿ 29ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದು ಕೇವಲ ಆರ್ಥಿಕ ದಾಳಿ ಮಾತ್ರವಲ್ಲದೆ, ರಾಜಕೀಯ ದಾಳಿಯೂ ಆಗಿದೆ. ಗುತ್ತಿಗೆ ಕಾರ್ಮಿಕರ ಪರವಾನಗಿಗಳಿಗೆ ಕಾರ್ಮಿಕರ ಮಿತಿ ಹೆಚ್ಚಳದಿಂದಾಗಿ ಶೇ.90ರಷ್ಟು ಕಾರ್ಮಿಕರಿಗೆ ವೇತನ, ಇಎಸ್‍ಐ, ಪಿಎಫ್, ಗ್ರಾಚ್ಯುಟಿ, ಭೋನಸ್ ಹಕ್ಕುಗಳಿಂದ ಹೊರಗುಳಿಯುತ್ತಾರೆ ಎಂದು ಪದಾಧಿಕಾರಿಗಳು ಆರೋಪಿಸಿದರು.
ಜೀವನೋಪಾಯ ವೇತನದ ಜಾರಿಯ ಪ್ರಸ್ತಾಪವಿಲ್ಲ, ಕನಿಷ್ಠ ವೇತನ ಅಥವಾ ರಾಷ್ಟ್ರೀಯ ಸರಾಸರಿ ವೇತನದ ಖಾತ್ರಿಯ ಬದಲಿಗೆ ತಳಹಂತದ 178ರೂ. ಕೂಲಿಯನ್ನು ಹೊಸದಾಗಿ ಪರಿಷ್ಕರಿಸಲಾಗಿದೆ. ಇನ್ನು ಯಾವುದೇ ವಲಯದ ವೇತನಗಳ ಹೆಚ್ಚಳಕ್ಕೆ ಆಧಾರವಿಲ್ಲದಂತೆ ಮಾಡಲಾಗಿದೆ. ಕಾರ್ಮಿಕರಿಂದ ಪ್ರಾಥಮಿಕವಾಗಿ ಸಂಘ ರಚಿಸಿಕೊಳ್ಳುವ ಹಕ್ಕುಗಳನ್ನು ನಿಬರ್ಂಧಿಸಲಾಗಿದೆ. ರಾಜ್ಯ ಸರಕಾರ ಈ ಕೋಡ್‍ಗಳಿಗೆ ನಿಯಮಾವಳಿ ರಚಿಸಬಾರದೆಂದೂ ಒತ್ತಾಯಿಸಿದರೂ ಕಾರ್ಮಿಕರ ಸಂಘಟನೆಗಳ ಬಳಿ ಕನಿಷ್ಠ ಚರ್ಚೆಯನ್ನು ಮಾಡುವ ಸೌಜನ್ಯ ತೋರದೇ ನಾಲ್ಕು ಕೋಡ್‍ಗಳಿಗೆ ಗೆಜೆಟ್ ಅಧಿಸೂಚನೆ ತಂದು ಕಾರ್ಮಿಕರು ಉಸಿರೆತ್ತದಂತಹ ಸ್ಥಿತಿಯನ್ನು ನಿರ್ಮಿಸುತ್ತಿದೆ ಎಂದು ಹೋರಾಟಗಾರರು ಆಕ್ಷೇಪಿಸಿದರು.
ಮನರೇಗಾ ಕಾಯ್ದೆಯಡಿಯಲ್ಲಿ ಖಾತರಿ ಪಡಿಸಲಾದ ಕೆಲಸ, ಕೆಲಸದ ಹಕ್ಕನ್ನು ಕಸಿದುಕೊಳ್ಳುವುದರ ಜೊತೆಗೆ ಗ್ರಾಮೀಣ ಶ್ರಮಜೀವಿಗಳ ಕೊಂಡುಕೊಳ್ಳುವ ಸಾಮಥ್ರ್ಯ ಕಡಿಮೆ ಮಾಡುವುದು ಮತ್ತು ಕೃಷಿ ಕಾರ್ಮಿಕರ, ಇತರೆ ಗ್ರಾಮೀಣ ಕಾರ್ಮಿಕರ ವೇತನವನ್ನು ನಿಗ್ರಹಿಸುತ್ತಿದೆ. ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ, ಕಂಪೆನಿ ಕೃಷಿಯನ್ನು ಉತ್ತೇಜಿಸಿ ಬಲವಂತದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ವಶಪಡಿಕೊಳ್ಳುತ್ತಿದೆ. ಇದರಿಂದ ರೈತರು ಕೂಲಿಕಾರರಾಗಿ, ನಿರುದ್ಯೋಗಸ್ಥರಾಗಿ ಮಾರ್ಪಾಡಾಗುತ್ತಿದ್ದಾರೆ ಎಂದು ತಿಳಿಸಿದರು.
ಫೆ.1ರಂದು ಕೇಂದ್ರ ಸರಕಾರ 53.5ಲಕ್ಷ ಕೋಟಿ ರೂ.ಬಜೆಟ್ ಅನ್ನು ಮಂಡಿಸಿದೆ. ಇದರಲ್ಲಿ ಜನಸಾಮಾನ್ಯರು ಅನುಭವಿಸುವ ಸಂಕಷ್ಟಗಳಿಗೆ ಪರಿಹಾರವಿಲ್ಲ. ಬದಲಿಗೆ ಬಂಡವಾಳಗಾರರಿಗೆ ಹಸೆಮಣೆ ಹಾಕಲಾಗಿದೆ. ನುಡಿದಂತೆ ನಡೆಯುತ್ತೇವೆಂದು ಹೇಳುವ ರಾಜ್ಯ ಸರಕಾರ, ಕೇಂದ್ರ ಸರಕಾರ ತರುತ್ತಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ತಾನೂ ಮುಂದುವರೆಸುತ್ತಿದೆ. ಈ ನೀತಿಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸುವುದಿಲ್ಲ ಎಂದು ರಾಜ್ಯ ಸರಕಾರ ಸ್ಪಷ್ಟವಾಗಿ ಘೋಷಿಸಬೇಕು ಎಂದು ಹೋರಾಟಗಾರರು ಒತ್ತಾಯ ಮಾಡಿದರು.
ಮನರೇಗಾ ಯೋಜನೆಯನ್ನು ಪುನರ್ ಸ್ಥಾಪಿಸಿ, ‘ವಿಬಿ-ಜಿ ಗ್ರಾಮ್ ಜಿ’ ಕಾಯ್ದೆ ರದ್ದುಗೊಳಿಸಬೇಕು. ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಬೇಕು, ಕೇಂದ್ರ ಮತ್ತು ರಾಜ್ಯ ಸರಕಾರಗಳು ತಂದಿರುವ ಭೂಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಸಗಿಕರಣ, ಬೀಜ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕು. 2025 ಆಗಸ್ಟ್ ತಿಂಗಳಲ್ಲಿ ಕನಿಷ್ಠ ವೇತನ ಹೆಚ್ಚಳದ ಕುರಿತು ಕನಿಷ್ಠ ವೇತನ ಸಲಹಾ ಮಂಡಳಿ ನೀಡಿರುವ ಶಿಫಾರಸ್ಸನ್ನು ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.






