ಹೈಕಮಾಂಡ್ ನಿರ್ಧಾರವನ್ನು ನಾನು, ಡಿ.ಕೆ.ಶಿವಕುಮಾರ್ ಸಹಿತ ಎಲ್ಲರೂ ಒಪ್ಪಿಕೊಳ್ಳಬೇಕು: ಖರ್ಗೆ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ

Photo credit:X/@siddaramaiah
ಬೆಂಗಳೂರು: ಪಕ್ಷ ಸಂಘಟನೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಚರ್ಚೆ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ನಾನು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ರಾತ್ರಿ ಇಲ್ಲಿನ ಸದಾಶಿವನಗರದಲ್ಲಿನ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಯಾವಾಗ ನನ್ನನ್ನು ಕರೆಯುತ್ತಾರೋ ಆಗ ನಾನು ಹೊಸದಿಲ್ಲಿಗೆ ಹೋಗುತ್ತೇನೆ. ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದರಂತೆ ನಡೆದುಕೊಳ್ಳುತ್ತೇನೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಒಂದೂವರೆ ಗಂಟೆ ಚರ್ಚೆ ಮಾಡಿದ್ದೇವೆ. ಇದೊಂದು ಸೌಜನ್ಯದ ಭೇಟಿಯಾಗಿತ್ತು ಅಷ್ಟೇ. ನಾನು ಯಾವಾಗಲು ಸಪ್ಪೆಯಾಗಿ ಇರುವುದಿಲ್ಲ. ಬದಲಿಗೆ ಹೆಚ್ಚು ಖುಷಿಯಾಗಿಯೂ ಇರುವುದಿಲ್ಲ. ಯಾವಾಗಲೂ ಒಂದೇ ರೀತಿಯಲ್ಲಿ ಇರುತ್ತೇನೆ ಎಂದು ಅವರು ತಿಳಿಸಿದರು.







