ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಎಲ್ಲ ಪಕ್ಷಗಳ ಒಗ್ಗಟ್ಟಿನ ಹೋರಾಟ ಅಗತ್ಯ: ಎಚ್.ಡಿ. ಕುಮಾರಸ್ವಾಮಿ
"ದುಂದುವೆಚ್ಚ ಮಾಡಿ ಸಂಪುಟ ಸಭೆ - ಇದು ಪ್ರಚಾರದ ಸ್ಟಂಟ್"

ಬೆಂಗಳೂರು: ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ನಿಲುವು ಒಂದೇ ಆಗಿದೆ. ಯಾವುದೇ ಕಾರಣಕ್ಕೂ ಈ ವರದಿಯನ್ನು ಅನುಷ್ಠಾನಕ್ಕೆ ತರಬಾರದು. ಈ ವರದಿಯಿಂದ ರೈತರಿಗೆ ಧಕ್ಕೆ ಆಗಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಶನಿವಾರ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಸೆ.21ರ ಸೋಮವಾರದಿಂದ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ಈ ಬಗ್ಗೆ ಏನು ಚರ್ಚೆಯಾಗುತ್ತದೆ ಎಂಬುದನ್ನು ಕಾದು ನೋಡೋಣ. ಕಸ್ತೂರಿ ರಂಗನ್ ವರದಿಯ ಬಗ್ಗೆ ಚರ್ಚೆ ನಡೆಯುತ್ತಿರುವುದು ಸಂತೋಷದ ವಿಚಾರವೇ. ಆದರೆ ಈ ಸರಕಾರ ದೃಢವಾಗಿ ರೈತರ ಪರ ನಿಲ್ಲುತ್ತದೆ ಎಂಬುದನ್ನು ನಾವು ಗಮನಿಸಬೇಕಾಗಿದೆ ಎಂದು ಹೇಳಿದರು.
ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಜನರು ಮತ್ತು ಬಹುಮುಖ್ಯವಾಗಿ ರೈತರು ಈ ವರದಿಯನ್ನು ಕಠಿಣವಾಗಿ ವಿರೋಧ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಜನಾಭಿಪ್ರಾಯಕ್ಕೆ ಅನುಗುಣವಾಗಿ ನಡೆಯಬೇಕಾಗುತ್ತದೆ. ವಿಚಿತ್ರವೆಂದರೆ ತಕ್ಷಣವೇ ಈ ಬಗ್ಗೆ ಸ್ಪಂದಿಸುವುದನ್ನು ಬಿಟ್ಟು ಸಿಎಂ, ಬರಗಾಲ ಮತ್ತು ಕಸ್ತೂರಿ ರಂಗನ್ ವರದಿಗಳ ಬಗೆಯೇ ಹಲವು ದಿನಗಳಿಂದ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸರಕಾರ ವಿಫಲ: ಬರದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ಹಿತವನ್ನು ಬದಿಗೊತ್ತಿ ಬೇರೆ ವಿಷಯಗಳನ್ನು ಮಗ್ನವಾಗಿರುವ ಸರಕಾರ, ರೈತರನ್ನು ಮತ್ತು ಜನರ ಹಿತವನ್ನು ಕಡೆಗಣಿಸಿದೆ. ಬರದ ಬಗ್ಗೆ ಚರ್ಚೆ ಮಾಡಲು ಸಮಯ ಎಲ್ಲಿದೆ? ಬರೀ ಪ್ರಚಾರ ಗಿಟ್ಟಿಸುವುದರಲ್ಲಿಯೇ ಇವರು ಸಮಯ ವ್ಯಯ ಮಾಡಿಸುತ್ತಿದ್ದಾರೆ. ಇದುವರೆಗೂ ರೈತರ ಕಷ್ಟವನ್ನು ಆಲಿಸಿಲ್ಲ. ಅವರಿಗೆ ಪರಿಹಾರವನ್ನು ಕೊಡುವ ಪ್ರಯತ್ನವನ್ನು ಮಾಡಿಲ್ಲ. ರಾಜ್ಯದ ಹಲವು ಬೆಳೆಗಳು ಮೊಳಕೆ ಹಂತದಲ್ಲಿ ಸುಟ್ಟು ಭಸ್ಮವಾಗಿದೆ. ರೈತರ ದುಡಿಮೆ ದುಡ್ಡು ಮಣ್ಣುಪಾಲಾಗಿದೆ. ಸರಕಾರ ಪರಿಹಾರ ನೀಡಬೇಕಾಗಿತ್ತು ಎಂದು ಅವರು ತಿಳಿಸಿದರು.
ಸ್ವಂತ ಹಣದಿಂದಲೇ ಸಿಎಂ ಸಾಲಮನ್ನಾ ಮಾಡಬಹುದು!
ರಾಜ್ಯ ಯಾವ ಸ್ಥಿತಿಯಲ್ಲಿದೆ ಎಂಬುದು ಈ ಮುಖ್ಯಮಂತ್ರಿಗೆ ಗೊತ್ತಿಲ್ಲವೇ? ಜನ ಜಾನುವಾರುಗಳಿಗೆ ನೀರಿಲ್ಲ, ದನ ಕರುಗಳಿಗೆ ಮೇವು ಸಿಗುತ್ತಿಲ್ಲ. ಏನೋ ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡಿದ್ದಾರೆ, ಸಿದ್ದರಾಮಯ್ಯ ಸಾಲಮನ್ನಾ ಮಾಡಿದ್ದಾರೆ. ಹೀಗಾಗಿ ನಾನು ಕೂಡ ಸಾಲಮನ್ನಾ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರಂತೆ. ಬೆಂಗಳೂರು ಸುತ್ತಮುತ್ತ ಬೇಕಾದಷ್ಟು ಲೂಟಿ ಹೊಡೆಯಲು ಹೊರಟಿದ್ದರಲ್ಲಾ? ಡಿಎಲ್ ಎಫ್ ತಾವರೆಕೆರೆಯ ಡಿವೈನಿಟಿ, ನೈಸ್ ವಿಚಾರದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆಯಲು ಹೊರಟೀದಾರಲ್ಲಾ? ಮನಸ್ಸು ಮಾಡಿದರೆ ಮುಖ್ಯಮಂತ್ರಿಗಳೇ ತಮ್ಮ ಕೈಯಿಂದಲೇ ಸಾಲಮನ್ನಾ ಮಾಡಬಹುದು! ಸರಕಾರದ ಆರ್ಥಿಕ ಇಲಾಖೆ ಯಾಕೆ? ಅವರ ಕೈಯಿಂದಲೇ, ವೈಯಕ್ತಿಕವಾಗೇ ಸಾಲಮನ್ನಾ ಮಾಡಬಹುದು ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ಊರಿಗೊಂದು ಕ್ಯಾಬಿನೆಟ್ ಮಾಡುವುದು ವಿಧಾನಸೌಧವೇನು ಟೂರಿಂಗ್ ಟಾಕೀಸಾ?
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಕೆಂಗಲ್ ಹನುಮಂತಯ್ಯನವರು ಆ ಕಟ್ಟಡವನ್ನು ನಿರ್ಮಿಸಿದ್ದರು. ಈಗ ಜಿಲ್ಲೆಗಳಿಗೆ ದಂಡು ದಂಡಾಗಿ ಹೋಗಿ ದುಂದುವೆಚ್ಚ ಮಾಡಿಕೊಂಡು ಸಂಪುಟ ಸಭೆ ಮಾಡುತ್ತಿದ್ದಾರೆ. ಇದು ಪ್ರಚಾರದ ಸ್ಟಂಟ್ ಬಿಟ್ಟರೆ ಬೇರೆ ಏನೂ ಅಲ್ಲ. ಹೊರಗೆ ಕ್ಯಾಬಿನೆಟ್ ಮಾಡುವುದಕ್ಕೆ ಇವರು ಖರ್ಚು ಮಾಡುತ್ತಿರುವ ಹಣವನ್ನು ರೈತರಿಗಾದರೂ ಕೊಟ್ಟಿದ್ದಿದ್ದರೆ ಅವರಿಗೆ ಸಹಾಯ ಆಗುತ್ತಿತ್ತು ಎಂದರು.
ಮೊದಲೇ ರಾಜ್ಯದ ಬೊಕ್ಕಸಕ್ಕೆ ಭಾರ ಹೆಚ್ಚಾಗಿದೆ. ಅದರ ಜತೆಗೆ ಇಂಥ ದುಂದುವೆಚ್ಚ ಬೇರೆ. ಇಂತಹ ಪ್ರವಾಸಗಳು ಸರಕಾರಕ್ಕೆ ಹೊರೆಯೇ ಹೊರತು ಬೇರೆ ಏನೂ ಅಲ್ಲ. ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಇಂತಹ ಸಭೆಗಳಿಂದ ರಾಜ್ಯ ಉದ್ಧಾರ ಆಗುವುದಿಲ್ಲ ಎಂದು ಸಚಿವರು ಹರಿಹಾಯ್ದರು.






