ದಲಿತ ವಿರೋಧಿ ಹೇಳಿಕೆ ಆರೋಪ; ಇಂದು ಹೈಕೋರ್ಟ್ ನಲ್ಲಿ ಪ್ರತಾಪ್ ಸಿಂಹ ಅರ್ಜಿ ವಿಚಾರಣೆ

ಬೆಂಗಳೂರು: ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಸೆ.18ರಂದು ಗಣೇಶ ವಿಸರ್ಜನೆ ಶೋಭಾಯಾತ್ರೆಯಲ್ಲಿ ದಲಿತ ಸಮುದಾಯದ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ.
ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ. ಶೋಭಾಯಾತ್ರೆಯಲ್ಲಿ ದಲಿತ ಸಂಘಟನೆಗಳ ಹೋರಾಟಗಾರರನ್ನು ಅವಮಾನ ಮಾಡಿ, ಸಾಂಸ್ಕತಿಕ ಅಸ್ಮಿತೆಯಾದ ನೀಲಿ ಶಾಲಿನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರ ಜಾತಿಯ ಬಗ್ಗೆ ಮಾತನಾಡಿರುವ ಕಾರಣ ಅವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಕೈಂಬಳ್ಳಿಯ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಕ್ರೀಡಾ ಕಲಾ ಸಂಘದ ಅಧ್ಯಕ್ಷ ಕೆ ಟಿ ಮಧು ದೂರು ನೀಡಿದ್ದರು.
ಈ ದೂರನ್ನ ಅಧರಿಸಿ ಟಿ. ನರಸೀಪುರ ಠಾಣೆಯಲ್ಲಿ ಎಸ್ ಸಿ/ ಎಸ್ ಟಿ ನಿಷೇಧ ಕಾಯ್ದೆಯಡಿ ಪ್ರತಾಪ್ ಸಿಂಹ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿತ್ತು. ಸದ್ಯ ಈ ಪ್ರಕರಣ ರದ್ದು ಕೋರಿ ಪ್ರತಾಪ್ ಸಿಂಹ ಅರ್ಜಿ ಸಲ್ಲಿಸಿದ್ದಾರೆ. ಪ್ರತಾಪ್ ಸಿಂಹ ಹೇಳಿಕೆಗೆ ಸಾಕಷ್ಟು ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಾಪ್ ಸಿಂಹ ಬಂಧನಕ್ಕೆ ಆಗ್ರಹಿಸಿವೆ.




