ಅರಣ್ಯ ಒತ್ತುವರಿ ಆರೋಪ; ರಮೇಶ್ ಕುಮಾರ್ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿನಗಲಕುಂಟೆ ಅರಣ್ಯ ವಲಯದ ಹೊಸಹುಡ್ಯ ಗ್ರಾಮದಲ್ಲಿ ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ಜಮೀನನ್ನು ಮೇಲ್ಮನವಿದಾರರಾದ ಕೆ.ಆರ್. ರಮೇಶ್ ಕುಮಾರ್ 30 ದಿನಗಳೊಳಗೆ ಖಾಲಿ ಮಾಡಿ ಶಾಂತಿಯುತವಾಗಿ ಹಸ್ತಾಂತರಿಸಬೇಕು ಎಂದು ಮೇಲ್ಮನವಿ ಪ್ರಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ-ಬೆಂಗಳೂರು) ಹೊರಡಿಸಿರುವ ಆದೇಶದ ಸಂಬಂಧ ಏಪ್ರಿಲ್ 21ರವರೆಗೆ ಆತುರದ ಕ್ರಮಕೈಗೊಳ್ಳದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಹಾಗೂ ಕೋಲಾರ ಜಿಲ್ಲಾಧಿಕಾರಿ 2013, 2014 ಹಾಗೂ 2025ರಲ್ಲಿ ಸಲ್ಲಿಸಿರುವ ವರದಿ ಸಂಬಂಧ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಧ್ಯಂತರ ಮಾಡಿ, ಅರ್ಜಿ ವಿಚಾರಣೆ ಮುಂದೂಡಿದೆ.
ಪ್ರಕರಣವೇನು?
ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ ಏಪ್ರಿಲ್ 10ರಂದು ಮೇಲ್ಮನವಿ ಪ್ರಾಧಿಕಾರ ಆದೇಶಿಸಿತ್ತು. 2011ರ ಜೂನ್ 24ರಂದು ಕೋಲಾರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಒತ್ತುವರಿ ತೆರವಿಗೆ ಆದೇಶಿಸಿದ್ದ ಕ್ರಮವನ್ನು ಮೇಲ್ಮನವಿ ಪ್ರಾಧಿಕಾರ ಎತ್ತಿಹಿಡಿದಿದೆ. 2025ರ ಜನವರಿ 15 ಹಾಗೂ 16ರಂದು ನಡೆಸಲಾದ ಜಂಟಿ ಸಮೀಕ್ಷೆಯಲ್ಲಿ ಒತ್ತುವರಿ ಆಗಿರುವುದು ದೃಢಪಟ್ಟಂತೆ ಹೊಡಹುಡ್ಯ ಗ್ರಾಮದ ಸರ್ವೆ ಸಂಖ್ಯೆ 1ರಲ್ಲಿ ಆರು ಎಕರೆ ಮತ್ತು ಸರ್ವೆ ಸಂಖ್ಯೆ 2ರಲ್ಲಿನ 54 ಎಕರೆ 23 ಗುಂಟೆ ಸೇರಿ ಒಟ್ಟು 60 ಎಕರೆ 23 ಗುಂಟೆ ಜಮೀನನ್ನು ತೆರವುಗೊಳಿಸಬೇಕು ಎಂದು ಆದೇಶಿಸಿದ್ದಾರೆ.
ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ಮೇಲ್ಮನವಿದಾರರು ನಿಗದಿತ ಅವಧಿಯೊಳಗೆ ಖಾಲಿ ಮಾಡದಿದ್ದಲ್ಲಿ, ಕೋಲಾರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯು ತಕ್ಷಣ ತೆರವಿಗೆ ಕ್ರಮ ಕೈಗೊಳ್ಳಬೇಕು. ಸಂಬಂಧಿತ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆಯಬೇಕು ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 64ಎ (2) ಪ್ರಕಾರ ವೆಚ್ಚ ಮಸೂಲಿ ಮಾಡಬೇಕು ಎಂದೂ ಸೂಚನೆ ನೀಡಿದ್ದಾರೆ. ಇದರಿಂದ, ರಮೇಶ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.






