ಶಾಹೀನ್ ಫಾಲ್ಕನ್ ಮುಖ್ಯಸ್ಥರಿಂದ ವಕ್ಫ್ ಭೂಮಿ ಕಬಳಿಕೆ ಆರೋಪ: ಸಿಓಡಿ ತನಿಖೆ ಕೋರಿ ಸಿಎಂಗೆ ಪತ್ರ
ವಕ್ಫ್ ಭೂಮಿ ಎಂದು ಸಾಬೀತಾದರೆ ಒಂದು ಕ್ಷಣವೂ ನಮ್ಮ ಹಕ್ಕು ಸಾಧಿಸುವುದಿಲ್ಲ: ಅಬ್ದುಲ್ ಸುಭಾನ್

ಸೈಯದ್ ಅಶ್ರಫ್
ಬೆಂಗಳೂರು, ಅ.27: ಶಾಹೀನ್ ಫಾಲ್ಕನ್ ಎಜುಕೇಷನ್ ಟ್ರಸ್ಟ್ನ ಮುಖ್ಯಸ್ಥ ಅಬ್ದುಲ್ ಮನ್ನಾನ್ ಸೇಠ್, ಅವರ ಪತ್ನಿ ಹಾಗೂ ಪುತ್ರ ಅಬ್ದುಲ್ ಸುಭಾನ್ ವಿರುದ್ಧ ವಕ್ಫ್ ಭೂಮಿ ಕಬಳಿಕೆ ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್, ಈ ಸಂಬಂಧ ಸಿಓಡಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೀದರ್ ಜಿಲ್ಲೆಯ ಹಲದಕೇರಿ ಗ್ರಾಮದ ಸರ್ವೆ ನಂ.85ರಲ್ಲಿರುವ ಹಝ್ರತ್ ಸೈಯದ್ ಶಾ ಅಲಿ ದರ್ಗಾಗೆ ಸೇರಿದ ವಕ್ಫ್ ಭೂಮಿಯಲ್ಲಿ 8 ಎಕರೆ 35 ಗುಂಟೆ ಹಾಗೂ 3 ಎಕರೆ 16 ಗುಂಟೆ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಅಲ್ಲದೆ, ಬಡಾವಣೆ ನಿರ್ಮಾಣ ಮಾಡಿ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ಮನ್ನಾನ್ ಸೇಠ್ ಹಾಗೂ ಅಬ್ದುಲ್ ಸುಭಾನ್ ಅವರಿಗೆ ವಕ್ಫ್ ಭೂಮಿ ಒತ್ತುವರಿ ತೆರವು ಮಾಡುವಂತೆ ವಕ್ಫ್ ಬೋರ್ಡ್ ನೋಟಿಸ್ ಜಾರಿಗೊಳಿಸಿದೆ. ರಾಜ್ಯ ಸರಕಾರವು ಸುಭಾನ್ ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವಕ್ಫ್ ಭೂಮಿಗೆ ಸಂಬಂಧಿಸಿದಂತೆ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಶಾಹೀನ್ ಫಾಲ್ಕನ್ ಎಜುಕೇಷನ್ ಟ್ರಸ್ಟ್ ನವರಿಗೆ ಶಾಲೆ, ಕಾಲೇಜುಗಳನ್ನು ನಡೆಸಲು ವಕ್ಫ್ ಭೂಮಿಯನ್ನು ಯಾಕೆ ಅತ್ಯಂತ ಕಡಿಮೆ ಬಾಡಿಗೆಗೆ ನೀಡಲಾಗುತ್ತಿದೆ. ಕ್ವೀನ್ಸ್ ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದಲ್ಲಿ 25 ಸಾವಿರ ಚ.ಅ. ಜಾಗ, ಬಿಸ್ಮಿಲ್ಲಾ ಶಾ ಮಸೀದಿಗೆ ಸೇರಿದ 30 ಸಾವಿರ ಚ.ಅ ಜಾಗವನ್ನು ನೀಡಲಾಗಿದೆ. ಇದಲ್ಲದೆ, ಮೈಸೂರು ರಸ್ತೆಯಲ್ಲಿರುವ ದರ್ಗಾ ಹಝ್ರತ್ ಸಾದಿಕ್ ಅಲಿ ಶಾ ಮತ್ತು ರೋಷನ್ ಮಸೀದಿಯ ಜಾಗವನ್ನು ಶಾಹೀನ್ ಫಾಲ್ಕನ್ ಅವರಿಗೆ ನೀಡಿರುವ ಉದ್ದೇಶವೇನು? ಎಂದು ಅವರು ಪ್ರಶ್ನಿಸಿದರು.
ಈ ಮೇಲ್ಕಂಡ ವಕ್ಫ್ ಸಂಸ್ಥೆಗಳಿಗೆ ಎಷ್ಟು ಪ್ರಮಾಣದಲ್ಲಿ ಶಾಹೀನ್ ಫಾಲ್ಕನ್ ಅವರು ಬಾಡಿಗೆ ನೀಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಅನಾಥಾಶ್ರಮದ ಒಡೆತನದಲ್ಲಿರುವ ವಕ್ಫ್ ಆಸ್ತಿಯನ್ನು ಬಳಸಿಕೊಳ್ಳುತ್ತಿರುವ ಇವರು ಎಷ್ಟು ಮಂದಿ ಬಡ, ಅನಾಥ ಹಾಗೂ ಅರ್ಹ ಕುಟುಂಬಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ? ಅನಾಥಾಶ್ರಮದ ಒಂದು ವಿದ್ಯಾರ್ಥಿಗೆ ವಾರ್ಷಿಕ ಒಂದೂವರೆ ಲಕ್ಷ ರೂ.ಶುಲ್ಕ ಪಡೆಯಲಾಗುತ್ತಿದೆ. ತಾಹಾ ಎಜುಕೇಶನ್ ಟ್ರಸ್ಟ್ ನವರ ಜಾಗದಲ್ಲಿಯೂ ಇವರು ಹಾಸ್ಟೆಲ್ ಮತ್ತು ಪಿಯು ಕಾಲೇಜು ನಡೆಸುತ್ತಿದ್ದಾರೆ. ಆ ಸಂಸ್ಥೆಗೆ 93.22 ಲಕ್ಷ ರೂ.ಗಳು(2023ರ ಮಾ.31ರವರೆಗೆ) ಬಾಡಿಗೆ ಪಾವತಿ ಮಾಡಿಲ್ಲ ಎಂದು ಸೈಯದ್ ಅಶ್ರಫ್ ದೂರಿದರು.
ದಾರುಸ್ಸಲಾಮ್ ಕಟ್ಟಡದಲ್ಲಿ ಮೂರನೆ ಮಹಡಿಯಲ್ಲಿ ನಡೆಸುತ್ತಿರುವ ಪಿಯು ಕಾಲೇಜಿಗೆ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಇನ್ನಿತರ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬಿಸ್ಮಿಲ್ಲಾ ಶಾ ಮಸೀದಿಗೆ ಸೇರಿದ 25 ಸಾವಿರ ಚ.ಅ. ಜಮೀನಿನಲ್ಲಿ ಶಾಲೆಯನ್ನು ನಡೆಸುತ್ತಿರುವ ಸುಭಾನ್ ಅವರು ಅಲ್ಲಿ ಬಿಬಿಎಂಪಿ, ವಕ್ಫ್ ಬೋರ್ಡ್ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಅವರು ದೂರಿದರು.
ಅಬ್ದುಲ್ ಸುಭಾನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ ಎಂಬ ಮಾಹಿತಿ ಇದೆ. ಯಾವುದೆ ಕಾರಣಕ್ಕೂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬಾರದು ಎಂದು ಸೈಯದ್ ಅಶ್ರಫ್ ಹೇಳಿದರು.
ವಕ್ಫ್ ಭೂಮಿ ಎಂದು ಸಾಬೀತಾದರೆ ಒಂದು ಕ್ಷಣವೂ ನಮ್ಮ ಹಕ್ಕು ಸಾಧಿಸುವುದಿಲ್ಲ: ಅಬ್ದುಲ್ ಸುಭಾನ್
ಬೀದರ್ ಜಿಲ್ಲೆಯ ಹಲದಕೇರಿ ಗ್ರಾಮದ ಸರ್ವೆ ನಂ.85ರಲ್ಲಿರುವ 8 ಎಕರೆ 35 ಗುಂಟೆ ಹಾಗೂ 3 ಎಕರೆ 16 ಗುಂಟೆ ಜಮೀನನ್ನು 2017ರಲ್ಲಿ ನನ್ನ ತಂದೆ ಅಬ್ದುಲ್ ಮನ್ನಾನ್ ಸೇಠ್ ಭೂಮಿಯ ಮಾಲಕ ಪ್ರೇಮ್ ಕುಮಾರ್ ಅವರಿಂದ ಖರೀದಿಸಿದ್ದಾರೆ. ಒಂದು ವೇಳೆ ರಾಜ್ಯ ವಕ್ಫ್ ಬೋರ್ಡ್ ಸಕ್ಷಮ ಪ್ರಾಧಿಕಾರದ ಮುಂದೆ ಹೋಗಿ, ಈ ಭೂಮಿ ವಕ್ಫ್ಗೆ ಸೇರಿದ್ದು ಎಂಬ ಆದೇಶವನ್ನು ತಂದರೆ ಒಂದು ಕ್ಷಣವು ನಾವು ಆ ಭೂಮಿಯ ಮೇಲೆ ನಮ್ಮ ಹಕ್ಕನ್ನು ಸಾಧಿಸುವುದಿಲ್ಲ ಎಂದು ಶಾಹೀನ್ ಎಜುಕೇಷನ್ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸುಭಾನ್ ತಿಳಿಸಿದರು.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸೈಯದ್ ಅಶ್ರಫ್ ಅವರ ಆರೋಪಗಳ ಕುರಿತು ಸ್ಪಷ್ಟೀಕರಣ ನೀಡಿದ ಅವರು, ಸರ್ವೆ ನಂ.85ರಲ್ಲಿ ಸೈಯದ್ ಉಸ್ಮಾನ್ ಹುಸೇನ್ ಅವರಿಗೆ ಸೇರಿದ ಇನಾಮ್ ಜಮೀನಾಗಿತ್ತು. ಅದರಲ್ಲಿ ದೇವಿ ದಾಸ್ ಎಂಬವರು 1967ರವರೆಗೆ ಉಳುಮೆ ಮಾಡುತ್ತಿದ್ದರು. ರಾಜ್ಯ ಭೂ ಸುಧಾರಣಾ ಕಾಯ್ದೆ 1961ರ ಅನ್ವಯ ದೇವಿದಾಸ್ ಅವರಿಗೆ ಭೂಮಿಯ ಮಾಲಕತ್ವ ನೀಡಲಾಯಿತು. 1976ರಲ್ಲಿ ಭೂ ನ್ಯಾಯ ಮಂಡಳಿಯು ದೇವಿದಾಸ್ ಅವರಿಗೆ ಭೂಮಿಯ ಪಟ್ಟೇದಾರ್ ಮಾಡಿ ಆದೇಶ ಹೊರಡಿಸಿತು ಎಂದರು.
-ಅಬ್ದುಲ್ ಸುಭಾನ್
ನಮ್ಮ ವಾದವನ್ನು ಆಲಿಸದೆ ಭೂ ನ್ಯಾಯ ಮಂಡಳಿಯು ಆದೇಶ ಮಾಡಿದೆ ಎಂದು ಪ್ರಶ್ನಿಸಿ ರಾಜ್ಯ ವಕ್ಫ್ ಬೋರ್ಡ್ ಕಾರ್ಯದರ್ಶಿ 1976ರಲ್ಲಿ ಹೈಕೋರ್ಟ್ ಮೊರೆ ಹೋದರು. 1982ರಲ್ಲಿ ಹೈಕೋರ್ಟ್ ವಕ್ಫ್ ಬೋರ್ಡ್ ವಾದವನ್ನು ಆಲಿಸಿ ಆದೇಶ ಹೊರಡಿಸುವಂತೆ ಸೂಚಿಸಿ ಅರ್ಜಿ ಇತ್ಯರ್ಥಗೊಳಿಸಿತ್ತು. ಭೂ ನ್ಯಾಯ ಮಂಡಳಿಯು ಪುನಃ ಈ ಪ್ರಕರಣದ ವಿಚಾರಣೆ ನಡೆಸಿ 1988ರಲ್ಲಿ ದೇವಿದಾಸ್ ನಿಧನ ಹೊಂದಿದ್ದರಿಂದ ಅವರ ಪುತ್ರ ಪ್ರೇಮ್ ಕುಮಾರ್ ಅವರಿಗೆ ಭೂಮಿಯ ಅಧಿಕಾರ ನೀಡಿ ಆದೇಶ ಹೊರಡಿಸಿತು ಎಂದು ಅವರು ತಿಳಿಸಿದರು.
ಇದಾದ ನಂತರ ವಕ್ಫ್ ಬೋರ್ಡ್ ಭೂ ನ್ಯಾಯ ಮಂಡಳಿಯ ಆದೇಶವನ್ನು ಪ್ರಶ್ನೆ ಮಾಡಿಲ್ಲ. ಆದರೆ, ಸ್ವರೂಪ್ ಕುಮಾರ್ ಎಂಬವರು ಈ ಆದೇಶವನ್ನು ಬೀದರ್ ಜಿಲ್ಲೆಯ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದರು. ಆಗ ಮೇಲ್ಮನವಿ ಪ್ರಾಧಿಕಾರವು ಭೂ ಒಡೆತನ ನೀಡಲಾಗಿದ್ದ ಎಲ್ಲ ಆದೇಶಗಳನ್ನು ಹಿಂಪಡೆಯಿತು. ಇದನ್ನು ಪ್ರೇಮ್ ಕುಮಾರ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದರು. ವಾದ, ಪ್ರತಿವಾದ ಆಲಿಸಿದ ನಂತರ 2003ರಲ್ಲಿ ಹೈಕೋರ್ಟ್ ಪುನಃ ಪ್ರೇಮ್ ಕುಮಾರ್ ಅವರಿಗೆ ಭೂಮಿಯ ಮಾಲಕತ್ವ ನೀಡಿ ಆದೇಶ ಹೊರಡಿಸಿತು. ವಕ್ಫ್ ಬೋರ್ಡ್ ಈ ಆದೇಶವನ್ನು ಈವರೆಗೆ ಪ್ರಶ್ನೆ ಮಾಡಿಲ್ಲ ಎಂದು ಅವರು ಹೇಳಿದರು.
2017ರಲ್ಲಿ ನನ್ನ ತಂದೆ ಅಬ್ದುಲ್ ಮನ್ನಾನ್ ಸೇಠ್ ಭೂಮಿಯ ಮಾಲಕ ಪ್ರೇಮ್ ಕುಮಾರ್ ಅವರಿಂದ 8 ಎಕರೆ 35 ಗುಂಟೆ ಹಾಗೂ 3 ಎಕರೆ 16 ಗುಂಟೆ ಜಮೀನನ್ನು ಖರೀದಿಸಿದ್ದಾರೆ. ಇದರಲ್ಲಿ ವಕ್ಫ್ ಭೂಮಿಯ ಒತ್ತುವರಿಯ ಪ್ರಶ್ನೆ ಎಲ್ಲಿಂದ ಬಂದಿದೆ. ಒಂದು ವೇಳೆ ವಕ್ಫ್ ಬೋರ್ಡ್ ಸಕ್ಷಮ ಪ್ರಾಧಿಕಾರದ ಮುಂದೆ ಹೋಗಿ, ಈ ಭೂಮಿ ವಕ್ಫ್ಗೆ ಸೇರಿದ್ದು ಎಂಬ ಆದೇಶವನ್ನು ತಂದರೆ ಒಂದು ಕ್ಷಣವು ನಾವು ಆ ಭೂಮಿಯ ಮೇಲೆ ನಮ್ಮ ಹಕ್ಕನ್ನು ಸಾಧಿಸುವುದಿಲ್ಲ ಎಂದು ಅಬ್ದುಲ್ ಸುಭಾನ್ ತಿಳಿಸಿದರು.
ರೋಷನ್ ಮಸೀದಿಗೆ ಸೇರಿದ ಜಾಗದಲ್ಲಿ ನಡೆಸುತ್ತಿರುವ ಪಿಯು ಕಾಲೇಜಿಗೆ ಪ್ರತಿ ತಿಂಗಳು 2 ಲಕ್ಷ ರೂ.ಬಾಡಿಗೆ ಪಾವತಿ ಮಾಡಲಾಗುತ್ತಿದೆ. ಬಿಸ್ಮಿಲ್ಲಾ ಶಾ ಮಸೀದಿಗೆ ಸೇರಿದ ಜಾಗದಲ್ಲಿ ನಡೆಯುತ್ತಿರುವ ಶಾಲೆಗೆ ಸಂಬಂಧಿಸಿದಂತೆ ಮಾಸಿಕ 3 ಲಕ್ಷ ರೂ.ಗಳನ್ನು ಹಾಗೂ ದಾರುಸ್ಸಲಾಮ್ ಕಟ್ಟಡದ ಮೂರನೆ ಮಹಡಿಯಲ್ಲಿರುವ ಪಿಯು ಕಾಲೇಜು 16 ಸಾವಿರ ಚ.ಅ. ಇದ್ದು, ಪ್ರತಿ ಚ.ಅ.ಗೆ 2018-19ರಲ್ಲಿ ಮಾಡಿಕೊಂಡ ಒಪ್ಪಂದಂತೆ 20 ರೂ.ಗಳಂತೆ ಬಾಡಿಗೆ ನೀಡುತ್ತಿದ್ದೇವೆ. ಇದು ಪ್ರತಿ ವರ್ಷ ಶೇ.5ರಷ್ಟು ಹೆಚ್ಚಳವಾಗುತ್ತದೆ ಎಂದು ಅವರು ಹೇಳಿದರು.
ತಾಹಾ ಎಜುಕೇಷನ್ ಟ್ರಸ್ಟ್ಗೆ ಸೇರಿದ ಜಾಗದಲ್ಲಿ 1.80 ಕೋಟಿ ರೂ.ಗಳನ್ನು ಖರ್ಚು ಮಾಡಿ ನಾವು ಕಟ್ಟಡ ನಿರ್ಮಾಣ ಮಾಡಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಬಾಡಿಗೆ ಮೊತ್ತವನ್ನು 2023ರ ಎ.1 ರಿಂದ 2024ರ ಮಾ.31ರವರೆಗಿನ ವಾರ್ಷಿಕ ಬಾಡಿಗೆ 17 ಲಕ್ಷ ರೂ.ಗಳನ್ನು ವಕ್ಫ್ ಬೋರ್ಡ್ಗೆ ನೀಡಲು ಜು.27ರಂದು ನಾನು ವಕ್ಫ್ ಬೋರ್ಡ್ಗೆ ಮೆಮೊ ನೀಡಿದ್ದೇನೆ. ನಾವು ಯಾವುದೆ ವಕ್ಫ್ ಜಾಗದ ಬಾಡಿಗೆಯನ್ನು ಉಳಿಸಿಕೊಂಡಿಲ್ಲ. ಸುಖಾಸುಮ್ಮನೆ ಅರೋಪಗಳನ್ನು ಮಾಡದೆ ಯಾವುದೆ ಸಮಯದಲ್ಲಿ ಬಂದು ನನ್ನ ಬಳಿ ಅಥವಾ ಸಂಬಂಧಪಟ್ಟ ಆಸ್ತಿಯ ನಿರ್ವಹಣೆ ಮಾಡುತ್ತಿರುವ ಸಮಿತಿಗಳ ಬಳಿಯೂ ದಾಖಲೆಗಳಿವೆ ಅದನ್ನು ಹೋಗಿ ಪರಿಶೀಲಿಸಬಹುದು ಎಂದು ಅಬ್ದುಲ್ ಸುಭಾನ್ ತಿಳಿಸಿದರು.







