ಜೀವ ಬೆದರಿಕೆ ಆರೋಪ; ಬಿಜೆಪಿ ಮಾಜಿ ಶಾಸಕ ಹಾಲಪ್ಪ ಸೇರಿ 43 ಜನರ ವಿರುದ್ಧ ವಿರುದ್ಧ ದೂರು ದಾಖಲು

ಎಚ್. ಹಾಲಪ್ಪ
ಸಾಗರ: ನಗರದ ಜನತಾ ಶಾಲೆ ಎದುರಿನ ನಿವೇಶನಕ್ಕೆ ಸಂಬಂಧಿಸಿದಂತೆ ಜುಲೈ 10ರ ಸಮಯದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾಜಿ ಸಚಿವ ಎಚ್. ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ಅವರೂ ಸೇರಿದಂತೆ 43 ಜನರ ವಿರುದ್ಧ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರದ ವಿಜಯಕುಮಾರ್ ಪಾಟೀಲ್ ಎಂಬುವವರು ದೂರು ನೀಡಿದ್ದು, ಕೊತ್ವಾಲಕಟ್ಟೆ ಗ್ರಾಮದ ಸರ್ವೆ ನಂ. 5/3ಕ್ಕೆ ಸಂಬಂಧಿಸಿದಂತೆ 13.12 ಗುಂಟೆ ಜಮೀನನ್ನು ಕೃಷ್ಣಮೂರ್ತಿ ಎಂಬುವವರಿಂದ 2019ರ ಜೂನ್ನಲ್ಲಿ ಖರೀದಿಸಿದ್ದೆ. ಅದು ಪಕ್ಕಾಪೋಡಿಯಾಗಿ ಸರ್ವೆ ನಂ. 5/4 ಆಗಿ ಪರಿವರ್ತನೆಯಾದ ನಿವೇಶನದ ವಿಚಾರವಾಗಿ ಆರೋಪಿಗಳು ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ 2022ರಲ್ಲಿ ನ್ಯಾಯಾಲಯದಿಂದ ಪ್ರತಿಬಂಧಕಾದೇಶ ಪಡೆದಿದ್ದೆ. ಈ ವರ್ಷದ ಜುಲೈ 10ರಂದು ಭೂ ಮಾಪನ ಅಧಿಕಾರಿಗಳು ಬಂದಾಗ ಆರೋಪಿಗಳಾದ ಪ್ರಕಾಶ್ ಕಲಾಲ್, ಅಭಿಷೇಕ್ ಕಲಾಲ್, ರಾಘು ಕಲಾಲ್, ನಿಖಿಲ್ ಕಲಾಲ್ ಸದರಿ ಸ್ವತ್ತಿನಲ್ಲಿ ಅಕ್ರಮ ಪ್ರವೇಶ ಮಾಡಿ, ಬೇಲಿ ಮುರಿದು ದಾಂಧಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಾಜಿ ಶಾಸಕ ಹಾಲಪ್ಪ ಜೀವ ಬೆದರಿಕೆ ಹಾಕಿದ್ದಾರೆ, ಮಾಧ್ಯಮ ಎದುರು ಸುಳ್ಳು ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದ ನಿರ್ದೇಶನದ ಪ್ರಕಾರ ಪೊಲೀಸರು ನ. 7ರಂದು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.





