ಪತಿ-ಪತ್ನಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ: ಸಚಿವ ಕೃಷ್ಣಬೈರೇಗೌಡ

ಬೆಳಗಾವಿ: ‘ಪೊಲೀಸ್ ಇಲಾಖೆಯಲ್ಲಿ ಪತಿ-ಪತ್ನಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.
ಗುರುವಾರ ವಿಧಾನಸಭೆಯ ಶೂನ್ಯವೇಳಲ್ಲಿ ಬಿಜೆಪಿ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ‘ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಪತಿ-ಪತ್ನಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿ ಕೊಡಲಾಗಿದೆ. ಪೊಲೀಸ್ ಅಧಿಕಾರಿಗಳ ಕನಿಷ್ಠ ವರ್ಗಾವಣೆ ಯನ್ನು 2 ವರ್ಷಗಳಿಗೆ ಹೆಚ್ಚಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆ ಪೊಲೀಸ್ ಇಲಾಖೆ ಅಧಿಕಾರಿ-ಸಿಬ್ಬಂದಿ ವರ್ಗಾವಣೆ ಎರಡು ವರ್ಷಕ್ಕೆ ನಿಗದಿಪಡಿಸಿತ್ತು. ಏಳು ವರ್ಷದ ಹಿಂದೆ ಅದನ್ನು ಒಂದು ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಪೊಲೀಸ್ ವರ್ಗಾವಣೆ ಕುರಿತು ಸರಕಾರ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಆರಂಭಕ್ಕೆ ಮಾತನಾಡಿದ ಯತ್ನಾಳ್, ‘ಪೊಲೀಸ್ ಸಬ್‍ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಡಿವೈಎಸ್ಪಿಗಳ ವರ್ಗಾವಣೆಯನ್ನು ಒಂದು ವರ್ಷಕ್ಕೆ ನಿಗದಿ ಪಡಿಸಲಾಗಿದೆ. ಒಂದು ಜಾಗಕ್ಕೆ ವರ್ಗಾವಣೆಗೊಂಡು ಕರ್ತವ್ಯ ಹಾಜರಾಗುವ ಅಧಿಕಾರಿಗಳೇ ಠಾಣೆಯ ಸರಹದ್ದಿನ ಮಾಹಿತಿ ಪಡೆದು, ಗೂಂಡಾಗಳನ್ನೂ ಮಟ್ಟ ಹಾಕುವ ವೇಳೆಗೆ ವರ್ಷ ಮುಗಿದು ಹೋಗುತ್ತದೆ. ಆದುದರಿಂದ ಕ್ರಿಮಿನಲ್ ಪ್ರಕರಣಗಳನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ವರ್ಗಾವಣೆ ಅವಧಿ ಕನಿಷ್ಟ 2ವರ್ಷಕ್ಕೆ ಹೆಚ್ಚಿಸಬೇಕು’ ಎಂದು ಕೋರಿದರು.







