ಶಾಲೆಗಳಲ್ಲಿ ಹಿಜಾಬ್ಗೆ ಅವಕಾಶ; ತುಷ್ಟೀಕರಣದ ಅತ್ಯಂತ ಬೇಜವಾಬ್ದಾರಿಯ ನಿರ್ಣಯ: ಬಸವರಾಜ ಬೊಮ್ಮಾಯಿ

Photo: x.com/BSBommai
ಬೆಂಗಳೂರು: ಯಾವುದೇ ಬೇಡಿಕೆ ಇಲ್ಲದಿದ್ದರೂ ಕೂಡ ಅತ್ಯಂತ ಶಾಂತಿ-ಸುವ್ಯವಸ್ಥೆಯಿಂದ ಶಿಕ್ಷಣ ವ್ಯವಸ್ಥೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿ, ಧರ್ಮದ ಆಧಾರದಲ್ಲಿ ಮಕ್ಕಳಲ್ಲಿ ಭೇದಭಾವ ಹುಟ್ಟುವಂತೆ ಮಾಡುವ ತುಷ್ಟೀಕರಣಕ್ಕಾಗಿ ರಾಜ್ಯ ಸರ್ಕಾರ ಈ ಆದೇಶ ಮಾಡಿದೆ. ಇದನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಆತಂಕ ಮತ್ತು ಭೇದಭಾವಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1980ರ ಶಾಲಾ ಸಮವಸ್ತ್ರ ಕಾನೂನು ಅಡಿಯಲ್ಲಿ ನಾವು ಆ ಸ್ಪಷ್ಟೀಕರಣದ ಆದೇಶವನ್ನು ಮಾಡಿದ್ದೇವೆ. ಅದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್ನಲ್ಲಿಯೂ ಅದು ವಿಭಜಿತ ತೀರ್ಪಾಗಿತ್ತು. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಇರುವಾಗಲೇ ಮಕ್ಕಳಲ್ಲಿ ಮತ್ತೆ ಭೇದಭಾವದ ಆತಂಕ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಯಾವುದೇ ಸ್ಪಷ್ಟವಾದ ನೀತಿ ಇಲ್ಲ. ಸಮರ್ಪಕ ವಿದ್ಯಾಭ್ಯಾಸ ನಡೆಯುತ್ತಿಲ್ಲ. ಶಿಕ್ಷಕರ ಕೊರತೆ ಇದೆ. ಇಂತಹ ಸಮಸ್ಯೆಗಳನ್ನು ಮುಚ್ಚಿಹಾಕಲು ಈ ರೀತಿಯ ಆದೇಶ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ಈ ರೀತಿಯ ಆದೇಶ ಮಾಡಿದ್ದಾರೆ. ಯಾತಕ್ಕಾಗಿ ಇದನ್ನು ತಂದಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಹೇಳಬೇಕು. ಈಗ ಏಕಾಏಕಿ ಮಾಡಿರುವುದು ತುಷ್ಟೀಕರಣದ ರಾಜಕಾರಣ ಬಿಟ್ಟರೆ ಮತ್ತೇನೂ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಹಿಜಾಬ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಸೌದಿ ಅರೇಬಿಯಾ, ಇರಾನ್ ಸೇರಿದಂತೆ ಇತರ ದೇಶಗಳಲ್ಲಿ ಹೆಣ್ಣು ಮಕ್ಕಳು ಹಿಜಾಬ್ ತೊರೆದು ತಮ್ಮ ನಿತ್ಯ ಜೀವನ ನಡೆಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮಾತ್ರ ಹೆಣ್ಣುಮಕ್ಕಳ ಹಿಂದುಳಿಕೆಯ ವಿಚಾರ ಮುಂದಿಟ್ಟುಕೊಂಡು ಕಾನೂನು ಮಾಡಿರುವುದು ಸೂಕ್ತವಲ್ಲ. ಇದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಆತಂಕ ಮತ್ತು ಭೇದಭಾವಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ.
ಕಾನೂನು ರೀತಿಯಲ್ಲಿ ರಾಜ್ಯ ಸರ್ಕಾರವೇ ವಿವಾದ ಹುಟ್ಟುಹಾಕಿದೆ. ಇದು ನಾಗರಿಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಇದು ಜವಾಬ್ದಾರಿಯುತ ಕ್ರಮವಲ್ಲ. ಅತ್ಯಂತ ಬೇಜವಾಬ್ದಾರಿಯ ನಿರ್ಣಯ ಎಂದು ತಿಳಿಸಿದ್ದಾರೆ.






