ರಾಜ್ಯದ ಎಲ್ಲ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವಂತೆ ಆದೇಶ ಹೊರಡಿಸಲು ಶಿಕ್ಷಣ ಸಚಿವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಲಹೆ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು ದಕ್ಷಿಣ: ರಾಜ್ಯದ ಎಲ್ಲ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ. ಈ ಸಂಘಗಳಿಂದ ಸರಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಆಗುತ್ತದೆ. ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ಶುಕ್ರವಾರ ಚನ್ನಪಟ್ಟಣ ತಾಲೂಕಿನ ಹೊಂಗನೂರಿನಲ್ಲಿ ಡಾ.ವೆಂಕಟಪ್ಪ ಅವರು ಕಣ್ವ ಫೌಂಡೇಶನ್ ವತಿಯಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಯಲ್ಲಿ ಓದಿ ದೊಡ್ಡ ಮಟ್ಟಕ್ಕೆ ಬೆಳೆದಿರುವವರು ಆ ಶಾಲೆಯ ಕಲ್ಯಾಣಕ್ಕೆ ಅಗತ್ಯ ನೆರವು ನೀಡುತ್ತಾರೆ. ಇದಕ್ಕೆ ಅಗತ್ಯ ಸಂಘಟನೆ ಆಗಬೇಕು. ವೆಂಕಟಪ್ಪನವರು ಮಾಡಿರುವ ಸಾಹಸಕ್ಕೆ ಇನ್ನು ಹೆಚ್ಚಿನ ಜನ ಕೈ ಹಾಕಬೇಕು. ಇಂತಹ ಕೆಲಸಗಳು ಸಮಾಜದಲ್ಲಿ ಅವರ ಹೆಸರುಗಳನ್ನು ಶಾಶ್ವತವಾಗಿ ಉಳಿಸುತ್ತವೆ ಎಂದು ಅವರು ತಿಳಿಸಿದರು.
ಮಕ್ಕಳ ಕೈಯಲ್ಲಿ ಈ ಶಾಲೆ ಉದ್ಘಾಟನೆ ಮಾಡಿಸಿದ್ದೇವೆ. ನನ್ನಂತೆಯೇ ಈ ಊರಿನ ಮಕ್ಕಳು ಬೆಳೆಯಬೇಕು ಎಂಬ ವೆಂಕಟಪ್ಪನವರ ದೂರದೃಷ್ಟಿಯಿಂದ ಈ ಜ್ಯೋತಿಯನ್ನು ಬೆಳಗಿಸಲಾಗಿದೆ. ರಾಜ್ಯದಲ್ಲಿ 2 ಸಾವಿರ ಸಿಎಸ್ಆರ್ ಶಾಲೆ ನಿರ್ಮಿಸಲು ಸರಕಾರ ಸಂಕಲ್ಪ ಮಾಡಿದೆ. ಸಿಎಸ್ಆರ್ ಶಾಲೆ ನಿರ್ಮಿಸಬೇಕು ಎಂದು ಸಚಿವ ಸಂಪುಟ ಉಪ ಸಮಿತಿ ಮಾಡಿ ನನ್ನದೇ ಆದ ರೂಪುರೇಷೆಗಳನ್ನು ನೀಡಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು, ಚನ್ನಪಟ್ಟಣದ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಕೆಂಗಲ್ ಹನುಮಂತಯ್ಯ ಅವರು ನಗರಸಭೆ ಅಧ್ಯಕ್ಷರಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 6 ಲಕ್ಷ ಮಾತ್ರ ಇತ್ತು. ಇಂದು 1.40 ಕೋಟಿಗೆ ಏರಿದೆ. ಇದನ್ನು ನಿಯಂತ್ರಿಸಬೇಕು. ಜನ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡಿದರೆ ಈ ವಲಸೆ ತಪ್ಪಿಸಬಹುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಸಿಎಸ್ಆರ್ ನಿಧಿಯಿಂದ ಗ್ರಾಮೀಣ ಭಾಗದಲ್ಲಿ ಶಾಲೆ ನಿರ್ಮಾಣಕ್ಕೆ ನಮ್ಮ ಜಿಲ್ಲೆ ಸಾಕಷ್ಟು ಮುಂದಿದೆ. ಇಡೀ ರಾಜ್ಯದಲ್ಲಿ ಇದು ದೊಡ್ಡ ಯೋಜನೆಯಾಗಿದೆ. ಸಿಎಸ್ಆರ್ ನಿಧಿ ಮೂಲಕ ಕನಕಪುರದಲ್ಲಿ 9, ಚನ್ನಪಟ್ಟಣದಲ್ಲಿ 5, ಮಾಗಡಿ 3, ರಾಮನಗರ 4, ಹಾರೋಹಳ್ಳಿಯಲ್ಲಿ 4 ಸೇರಿದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 24 ಶಾಲೆಗಳನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಆಮೂಲಕ ಶಿಕ್ಷಣ ಕ್ರಾಂತಿಗೆ ಕೈಹಾಕಿದ್ದೇವೆ ಎಂದು ಅವರು ಹೇಳಿದರು.
ಈ ಊರಿನ ದಿವಂಗತ ಶ್ರೀನಿವಾಸ ಗೌಡರು 4 ಎಕರೆ ಜಾಗವನ್ನು ದಾನ ಮಾಡಿದ್ದಾರೆ. ಅವರನ್ನು ನಾನು ಸ್ಮರಿಸಿಕೊಳ್ಳಬೇಕು. ನಾವು ಶಾಲೆಗಳಿಗಾಗಿ ಕೆಲವು ಜಾಗ ದಾನ ಮಾಡಿದ್ದೇವೆ. ಆದರೆ ವೆಂಕಟಪ್ಪನವರು ನಿಸ್ವಾರ್ಥದಿಂದ ಸರಕಾರಿ ಶಾಲೆ ನಿರ್ಮಾಣಕ್ಕೆ 14 ಕೋಟಿ ರೂ. ವೆಚ್ಚ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಪುಟ್ಟಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







