‘ಅಂಬೇಡ್ಕರ್ ಪ್ರಶಸ್ತಿ’ ಪ್ರಕಟ | ಇಂದೂಧರ, ಮಾವಳ್ಳಿ ಶಂಕರ್, ಲಕ್ಷ್ಮೀಪತಿ, ಶ್ರೀಧರ್ ಕಲಿವೀರ, ಹೊನ್ನೂರು ಗೌರಮ್ಮ ಸೇರಿ 15 ಮಂದಿ ಆಯ್ಕೆ

ಲಕ್ಷ್ಮೀಪತಿ ಕೋಲಾರ/ ಮಾವಳ್ಳಿ ಶಂಕರ್/ ಇಂದೂಧರ ಹೊನ್ನಾಪುರ
ಬೆಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಹಾಗೂ 2025ನೆ ಸಾಲಿನ ಪ್ರತಿಷ್ಠಿತ ‘ಅಂಬೇಡ್ಕರ್ ಪ್ರಶಸ್ತಿ’ಗೆ ಪತ್ರಕರ್ತ ಇಂದೂಧರ ಹೊನ್ನಾಪುರ, ನಿವೃತ್ತ ಅಧಿಕಾರಿ ರುದ್ರಪ್ಪ ಹನಗವಾಡಿ, ಸಾಹಿತಿ ಲಕ್ಷ್ಮೀಪತಿ ಕೋಲಾರ, ಹೋರಾಟಗಾರರಾದ ಶ್ರೀಧರ್ ಕಲಿವೀರ, ಮಾವಳ್ಳಿ ಶಂಕರ್ ಹಾಗೂ ಹೊನ್ನೂರು ಗೌರಮ್ಮ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಬುಧವಾರ ಸಮಾಜ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಲ್.ನರಸಿಂಹಮೂರ್ತಿ ಆದೇಶ ಹೊರಡಿಸಿದ್ದು, 2023ನೆ ಸಾಲಿಗೆ ಹರಿಹರಾನಂದ ಸ್ವಾಮಿ(ಸಮಾಜ ಸೇವೆ), ಇಂದೂಧರ ಹೊನ್ನಾಪುರ (ಪತ್ರಿಕೋದ್ಯಮ), ರುದ್ರಪ್ಪ ಹನಗವಾಡಿ(ಆಡಳಿತ), ಸೀತವ್ವ ಜೋಡಟ್ಟಿ(ದೇವದಾಸಿ ವಿಮೋಚನೆ), ಕೆ.ಪುಂಡಲೀಕರಾವ್ ಶೆಟ್ಟಿಬಾ(ಸಮಾಜ ಸೇವೆ/ರಾಜಕೀಯ) ಅವರನ್ನು ಆಯ್ಕೆ ಮಾಡಲಾಗಿದೆ.
2024ನೇ ಸಾಲಿಗೆ ಶ್ರೀಧರ ಕಲಿವೀರ(ಹೋರಾಟ), ಮುಲ್ಲಾ ಜಮ್ಮ (ಸಮಾಜ ಸೇವೆ/ರಾಜಕೀಯ), ರಾಮದೇವ ರಾಕೆ(ಪತ್ರಿಕೋದ್ಯಮ), ವೈ.ಬಿ.ಹಿಮ್ಮಡಿ(ಸಾಹಿತ್ಯ/ಸಮಾಜ ಸೇವೆ), ಲಕ್ಷ್ಮೀಪತಿ ಕೋಲಾರ( ಸಾಹಿತ್ಯ/ಸಂಘಟನೆ) ಅವರಿಗೆ ಪ್ರಶಸ್ತಿ ಸಂದಿದೆ.
2025ನೇ ಸಾಲಿಗೆ ದತ್ತಾತ್ರೇಯ ಇಕ್ಕಳಗಿ(ಪ್ರಕಾಶನ) ಮಾವಳ್ಳಿ ಶಂಕರ್(ಹೋರಾಟ), ಎಫ್.ಎಚ್. ಜಕ್ಕಪ್ಪನವರ್(ಹೋರಾಟ), ಹೊನ್ನೂರು ಗೌರಮ್ಮ(ಜನಪದ ಕಲೆ) ಹಾಗೂ ಈರಪ್ಪ(ದಲಿತ ಹೋರಾಟ) ಅವರನ್ನು ಆಯ್ಕೆ ಮಾಡಲಾಗಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಎ.14ರಂದು ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿಯು 5ಲಕ್ಷ ರೂ.ನಗದು, ಪ್ರಶಸ್ತಿ ಫಲಕ, ಶಾಲು, ಫಲ-ತಾಂಬೂಲ ಒಳಗೊಂಡಿದೆ ಎಂದು ತಿಳಿಸಲಾಗಿದೆ.







