ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಇಂದೇ ಪರಿಹಾರ ಘೋಷಿಸಲಿ: ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಇಂದು ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್‍ಡಿಆರ್‌ಎಫ್ ಅಡಿ ಬರ ಪರಿಹಾರ ಘೋಷಣೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಗ್ರಹಿಸಿದ್ದಾರೆ.
ರವಿವಾರ ವಿಧಾನಸೌಧದ ತಮ್ಮ ಸಮಿತಿ ಕೊಠಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬರ ಪರಿಹಾರ ಕೋರಿ ಕೇಂದ್ರ ಸರಕಾರಕ್ಕೆ 18,178 ಕೋಟಿ ಬರ ಪರಿಹಾರ ಅನುದಾನವನ್ನು ಬಿಡುಗಡೆ ಮಾಡಲು ಮನವಿಯನ್ನು ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಪ್ರಧಾನಮಂತ್ರಿ ನರೇಂದ್ರ ಮೋದಿ ಅನ್ನು ಖುದ್ದು ಭೇಟಿಯಾಗಿ ಬರ ಪರಿಹಾರದ ಅನುದಾನ ಬಿಡುಗಡೆಗೆ ಮಾಡಲು ಮನವಿ ಮಾಡಿದ್ದಾರೆ ಎಂದರು.
ಜತೆಗೆ, ಕೇಂದ್ರ ಗೃಹ ಸಚಿವರನ್ನು ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯ ಸರಕಾರದ ಹಲವು ಸಚಿವರು ಖುದ್ದು ಭೇಟಿ ಮಾಡಿ, ಬರ ಪರಿಹಾರ ನೀಡಲು ಮನವಿಯನ್ನು ಮಾಡಿದ್ದಾರೆ. ಈಗಾಗಲೇ ಬರ ಪರಿಹಾರಕ್ಕೆ ಮನವಿಯನ್ನು ಸಲ್ಲಿಸಿ ನಾಲ್ಕು ತಿಂಗಳು ಕಳೆದಿದ್ದು, ಕೇಂದ್ರ ಗೃಹ ಸಚಿವರು ರಾಜ್ಯ ಪ್ರವಾಸದಲ್ಲಿರುವ, ಈ ಸಂದರ್ಭದಲ್ಲಿ, ಬರ ಪರಿಹಾರ ಘೋಷಿಸಿದರೆ ರಾಜ್ಯದ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ಹೇಳಿದರು.
ಶ್ರೀಮಂತರಿಗೆ ಟ್ಯಾಕ್ಸ್ ಬಿಟ್ಟಿ ಭಾಗ್ಯ: ಕೇಂದ್ರ ಸರಕಾರ ಶ್ರೀಮಂತರಿಗೆ ಕೊಡುವ 1 ಲಕ್ಷದ 75 ಸಾವಿರ ಕೋಟಿ ರೂಪಾಯಿ ತೆರಿಗೆ ವಿನಾಯಿತಿ ಬಿಟ್ಟಿ ಭಾಗ್ಯ ಅಲ್ಲವೇ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು. ಬಡವರಿಗೆ ಕೊಟ್ಟರೆ ಮಾತ್ರ ಬಿಟ್ಟಿ ಭಾಗ್ಯ ಎನ್ನುತ್ತಾರೆ. ಶ್ರೀಮಂತರು ವರ್ಷಕ್ಕೆ 5 ಲಕ್ಷ ಕೋಟಿ ಸಾಲ ಮನ್ನಾ ಅಗುತ್ತಿದೆ. ಅದು ಬಿಟ್ಟಿ ಭಾಗ್ಯ ಅಲ್ಲವೇ? ಬದುಕೋದಕ್ಕೆ ಬಡವರಿಗೆ ಸಹಾಯ ಮಾಡುವ ಶಕ್ತಿ ತುಂಬುವುದು ಬಿಟ್ಟಿ ಭಾಗ್ಯಾನಾ? ಎಂದು ಅವರು ಕೇಳಿದರು.







