ಅಕ್ರಮ ಅದಿರು ಸಾಗಣೆ ಪ್ರಕರಣ | ಮಾಜಿ ಸಚಿವ ಆನಂದ್ ಸಿಂಗ್ಗೆ ಬಿಗ್ ರಿಲೀಫ್

ಆನಂದ್ ಸಿಂಗ್
ಬೆಂಗಳೂರು : ಇಲ್ಲಿನ ಬಳ್ಳಾರಿಯ ವ್ಯಾಸನಕೆರೆ ಗಣಿಯಿಂದ ಅಕ್ರಮ ಅದಿರು ಸಾಗಾಣೆ ಮಾಡಿದ ಆರೋಪ ಸಂಬಂಧ ಮಾಜಿ ಸಚಿವ ಆನಂದ ಸಿಂಗ್, ಗೋವಾದ ಹಾಲಿ ಸಚಿವ ರೋಹನ್ ಅಶೋಕ್ ಖಾವುಂತೆ ಸೇರಿದಂತೆ ಪ್ರಮುಖರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ಶುಕ್ರವಾರ ಪ್ರಕಟಿಸಿದರು.
ಅರ್ಜಿದಾರರು, ಎಸ್.ಬಿ.ಮಿನರಲ್ಸ್ ಗೆ ಸೇರಿದ ಗಣಿಯಿಂದ 16,987 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟುಮಾಡಿದ ಆರೋಪ ಎದುರಿಸುತ್ತಿದ್ದರು. ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿರುವ ನ್ಯಾಯಾಧೀಶರು, ಆನಂದ್ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 409 (ನಂಬಿಕೆ ದ್ರೋಹ), 420 (ವಂಚನೆ), 120 ಬಿ (ಒಳಸಂಚು) ಮತ್ತು ಕರ್ನಾಟಕ ಅರಣ್ಯ ಕಾಯ್ದೆಯ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಾಗಿತ್ತು.





