ಕಾರು ಓವರ್ ಟೇಕ್ ವಿಚಾರದಲ್ಲಿ ಗಲಾಟೆ: ಅನಂತ್ ಕುಮಾರ್ ಹೆಗಡೆ ಅವರ ಭದ್ರತಾ ಸಿಬ್ಬಂದಿ, ಚಾಲಕನಿಂದ ಗೂಂಡಾಗಿರಿ!
ಎಫ್ಐಆರ್ ದಾಖಲು

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಬಿಜೆಪಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಗನ್‌ಮ್ಯಾನ್ ಹಾಗೂ ಚಾಲಕ ಮತ್ತೊಂದು ಕಾರಿನಲ್ಲಿದ್ದವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ದಾಬಸ್ ಪೇಟಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾರು ಚಾಲಕ ಸಲ್ಮಾನ್, ಸೈಫ್, ಇಲ್ಯಾಸ್ ಖಾನ್, ಗುಲ್ಷೀರಾ ಉನ್ನಿಸಾ ಎಂಬುವರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕಾರವಾರದಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿ ನೆಲಮಂಗಲದ ನಿಜಗಲ್ ತಾಲೂಕಿನಲ್ಲಿ ಕಾರು ಓವರ್‌ಟೇಕ್ ಮಾಡಿದ್ದಾರೆ ಎನ್ನುವ ವಿಚಾರಕ್ಕೆ ಅನಂತ್ ಕುಮಾರ್ ಹೆಗಡೆ ಕಾರು ಚಾಲಕ ಮಹೇಶ್, ಗನ್ ಮ್ಯಾನ್ ಶ್ರೀಧರ್ ಮತ್ತು ಅನಂತ್ ಕುಮಾರ್ ಹೆಗಡೆ ಅವರ ಪುತ್ರ ಆಶುತೋಷ್ ಕಾರು ಅಡ್ಡಗಡ್ಡಿ ವಾಗ್ವಾದ ನಡೆಸಿದ್ದು ಮಾತ್ರವಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಕಾರಿನಲ್ಲಿದ್ದ ಮಹಿಳೆಯರು ಕ್ಷಮೆಯಾಚಿಸಿದರೂ, ಹಲ್ಲೆ ನಡೆಸಿ ಬೆದರಿಕೆವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳುಗಳನ್ನು ದಾಬಸ್ ಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತೊಂದೆಡೆ, ನೆಲಮಂಗಲ ಗ್ರಾಮಾಂತರ ಠಾಣಾ ಡಿವೈಎಸ್ಪಿ ಕಚೇರಿಯಲ್ಲಿ ಡಿವೈಎಸ್ಪಿ ಜಗದೀಶ್ ಅವರು ಅನಂತ್ ಕುಮಾರ್ ಹೆಗಡೆಯ ವಿಚಾರಣೆ ನಡೆಸಿದ್ದಾರೆ.
ಇನ್ನೂ, ಘಟನೆ ಸಂಬಂಧ ಡ್ರೈವರ್ ಹಾಗೂ ಗನ್ ಮ್ಯಾನ್ ಹಲ್ಲೆ ನಡೆಸಿರುವುದು ಒಪ್ಪಿಕೊಂಡಿದ್ದು, ಅನಂತ ಕುಮಾರ್ ಹೆಗಡೆ "ನಾನು ಕಾರಿನಲ್ಲೆ ಇದ್ದೆ ಹಲ್ಲೆ ಮಾಡಿಲ್ಲ" ಎಂದಿದ್ದಾರೆ. ಘಟನೆ ಸಂಬಂಧ ದಾಬಸ್ ಪೇಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರಿನ ಅನ್ವಯ ಪ್ರಕರಣ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.







