ಕರ್ನಾಟಕದ ತೋತಾಪುರಿ ಮಾವಿಗೆ ನಿಷೇಧ ಹೇರಿದ ಆಂಧ್ರ; ಚಂದ್ರಬಾಬು ನಾಯ್ಡುಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಮಾವು ಮೇಲಿನ ನಿಷೇಧ ರದ್ದು ಕೋರಿ ಮನವಿ

ಸಿದ್ದರಾಮಯ್ಯ, ಚಂದ್ರಬಾಬು ನಾಯ್ಡು
ಬೆಂಗಳೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದ ತೋತಾಪುರಿ ಮಾವು ಖರೀದಿಗೆ ನಿಷೇಧ ಹೇರಿರುವುದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ನಿರ್ಧಾರವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ನಿಷೇಧವು ಸಾವಿರಾರು ರೈತರು ಮತ್ತು ವ್ಯಾಪಾರಿಗಳಿಗೆ ನೋವುಂಟು ಮಾಡುತ್ತದೆ. ನಮ್ಮ ಜನರ ಏಳಿಗೆಗೆ, ರಾಜ್ಯಗಳ ನಡುವಿನ ಸಹಕಾರ ಅತ್ಯಗತ್ಯ’. ಪೂರ್ವ ಸಮಾಲೋಚನೆ ಅಥವಾ ಸಮನ್ವಯವಿಲ್ಲದೆ ತೆಗೆದುಕೊಳ್ಳಲಾದ ಇಂತಹ ಏಕಪಕ್ಷೀಯ ಕ್ರಮಗಳು ಸಹಕಾರಿ ಒಕ್ಕೂಟದ ಮನೋಭಾವಕ್ಕೆ ವಿರುದ್ಧವಾಗಿವೆ ಎಂದು ಸಿಎಂ ಸಿದ್ದರಾಮಯ್ಯ ಆಂದ್ರ ಸಿಎಂಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಈ ಕ್ರಮವು ಪ್ರತೀಕಾರದ ಕ್ರಮಗಳಿಗೆ ಮತ್ತು ಸರಕುಗಳ ಅಂತರ-ರಾಜ್ಯ ಸಾಗಣೆಗೆ ಅಡ್ಡಿಯಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಆದೇಶ ಹಿಂಪಡೆಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.





