90 ದಿನದೊಳಗೆ ಅಂಗನವಾಡಿ ಹುದ್ದೆ ಭರ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳನ್ನು 90 ದಿನದೊಳಗಾಗಿ ಭರ್ತಿ ಮಾಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿ ಸದಸ್ಯ ಗುರುಮೆ ಸುರೇಶ್ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಡವರ ಮಕ್ಕಳು ಓದುವ ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ವಾತಾವರಣ ಇರಬೇಕು ಎಂಬುದು ಸರಕಾರದ ಬದ್ಧತೆ. ಈ ನಿಟ್ಟಿನಲ್ಲಿ ಎಲ್ಲಿಯೂ ಹುದ್ದೆಗಳನ್ನು ಖಾಲಿ ಬಿಡಲು ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದರು.
ತೆರವಾದ ಹುದ್ದೆಗಳಿಗೆ ಸ್ಥಳೀಯವಾಗಿಯೇ 12 ಜನ ಸದಸ್ಯರು ಇರುವ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ನೇಮಕಾತಿ ಪ್ರಕ್ರಿಯೆಗಳನ್ನು ಕೈಗೊಳ್ಳಲಿದೆ. ಒಟ್ಟಾರೆ 90 ದಿನದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅಂಗನವಾಡಿ ಕಾರ್ಯಕರ್ತರು ಆಯಾ ಗ್ರಾಮಗಳಲ್ಲೇ ವಾಸವಿರಬೇಕು ಎಂಬುದನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ ಎಂದೂ ಅವರು ಉಲ್ಲೇಖಿಸಿದರು.
ಇದೇ ವೇಳೆ ಬಿಜೆಪಿ ಸದಸ್ಯ ಸಿದ್ದು ಸವದಿ ಅವರು ಉದ್ಯೋಗಿನಿ ಯೋಜನೆಯ ಬಗ್ಗೆ ಪ್ರಶ್ನೆ ಕೇಳಿದಾಗ ಉತ್ತರ ನೀಡಿದ ಸಚಿವರು, ಉದ್ಯೋಗಿನಿ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಶಾಸಕರ ನೇತೃತ್ವದಲ್ಲಿ ಸಮಿತಿಗಳಿವೆ. ಶಾಸಕರು ಫಲಾನುಭವಿಗಳ ಆಯ್ಕೆ ಪಟ್ಟಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಆ ನಂತರ ಅದನ್ನು ಬ್ಯಾಂಕುಗಳಿಗೆ ಕಳುಹಿಸಿದರೆ ಅಲ್ಲಿ ಎಂಟರಿಂದ ಒಂಬತ್ತು ತಿಂಗಳು ವಿಳಂಬವಾಗುತ್ತಿದೆ. ಆದರೆ, ಸರಲೀಕರಣ ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.






