ವಿಧಾನಸಭೆಯಲ್ಲಿ ಬಹುನಿರೀಕ್ಷಿತ ಅಪಾರ್ಟ್‍ಮೆಂಟ್ ವಿಧೇಯಕ ಮಂಡನೆ

ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ಅಪಾರ್ಟ್‍ಮೆಂಟ್(ಮಾಲಕತ್ವ ಮತ್ತು ನಿರ್ವಹಣೆ) ವಿಧೇಯಕ-2026 ವಿಧಾನಸಭೆಯಲ್ಲಿ ಮಂಡನೆಯಾಗಿದ್ದು, ಇದರಿಂದ ರಾಜ್ಯದ ಅಪಾರ್ಟ್‍ಮೆಂಟ್ ಮನೆ ಮಾಲಕರ ಹಿತರಕ್ಷಣೆ, ಹಕ್ಕು ರಕ್ಷಣೆಗೆ ಇನ್ನಷ್ಟು ಬಲ ಸಿಕ್ಕಿದೆ.
ಈ ಸಂಬಂಧ ಹಳೆಯ ಕಾಯ್ದೆ ಅನ್ನು 1972ರಲ್ಲಿ ರೂಪಿಸಲಾಗಿತ್ತು. ಆ ಸನ್ನಿವೇಶದಲ್ಲಿ ಅಪಾರ್ಟ್‍ಮೆಂಟ್ ಸಂಸ್ಕøತಿ ವಿರಳವಾಗಿತ್ತು. ಕಳೆದ 20 ವರ್ಷಗಳಿಂದೀಚೆಗೆ ಅಪಾರ್ಟ್‍ಮೆಂಟ್ ಸಂಸ್ಕøತಿ ವ್ಯಾಪಕವಾಗಿ ಬೆಳೆದು ಬಂದಿದೆ. ಆದರೆ, ಈಗಿನ ಸನ್ನಿವೇಶಕ್ಕೆ ಅನುಗುಣವಾಗಿ ಕಾನೂನುಗಳಲ್ಲಿ ತಿದ್ದುಪಡಿಯಾಗಿಲ್ಲ. ಪ್ರಸ್ತಾಪಿತ ಹೊಸ ಕಾನೂನು ಅಪಾರ್ಟ್‍ಮೆಂಟ್ ಮನೆ ಮಾಲಕರಿಗೆ ಹೆಚ್ಚಿನ ಅಧಿಕಾರ ನೀಡಲಿದೆ.ಜತೆಗೆ, ಹಳೆಯ ಕಾನೂನಿನಲ್ಲಿನ ಲೋಪದೋಷ, ನ್ಯೂನತೆಗಳನ್ನು ಬದಲಾಯಿಸಲಿದೆ.
ಸಚಿವ ಬಿ.ನಾಗೇಂದ್ರ ರಾಜಿನಾಮೆಗೆ ಒತ್ತಾಯಿಸಿ ಬುಧವಾರವೂ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಮುಂದುವರೆಸಿದರು. ಇದರ ನಡುವೆಯೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ಕರ್ನಾಟಕ ಅಪಾರ್ಟ್‍ಮೆಂಟ್ (ಮಾಲಕತ್ವ ಮತ್ತು ನಿರ್ವಹಣೆ) ವಿಧೇಯಕ-2026 ಅನ್ನು ಮಂಡನೆ ಮಾಡಿದರು.
ಹೊಸ ಪ್ರಸ್ತಾಪಿತ ಮಸೂದೆಯಲ್ಲಿ ಕಟ್ಟಡದಲ್ಲಿನ ಒಂದು ಅಪಾರ್ಟ್‍ಮೆಂಟ್‍ನ ಮಾಲಕತ್ವ ಸಂಬಂಧಿತ ಕಾನೂನುಗಳನ್ನು ಕ್ರೋಢೀಕರಿಸಲಾಗಿದೆ. ರಾಜ್ಯದಲ್ಲಿನ ಅಪಾರ್ಟ್‍ಮೆಂಟ್‍ಗಳ ನಿರ್ವಹಣೆಗಾಗಿ ಸ್ಪಷ್ಟ ರೂಪುರೇಷೆ ರೂಪಿಸಲಾಗಿದೆ. ಅಪಾರ್ಟ್‍ಮೆಂಟ್ ಮಾಲೀಕರ ಸಂಘಗಳ ನೋಂದಣಿ ಮತ್ತು ನಿರ್ವಹಣೆ ಗೊಂದಲ ಪರಿಹಾರ, ಅಪಾರ್ಟ್‍ಮೆಂಟ್‍ಗಳಲ್ಲಿನ ಗೃಹ ಖರೀದಿದಾರರ ಸಂಘಕ್ಕೆ ಕಾಮನ್ ಏರಿಯಾ ಹಸ್ತಾಂತರ, ಬಿಲ್ಡರ್ ಗಳಿಂದ ಭೂಮಿಯ ಮೇಲಿನ ಹಕ್ಕು ಸಂಘಗಳಿಗೆ ವರ್ಗಾವಣೆ ಮಾಡುವುದು ಹೊಸ ಮಸೂದೆಯ ಉದ್ದೇಶವಾಗಿದೆ.
ಪ್ರಮುಖವಾಗಿ ಒಂದು ಕಟ್ಟಡದಲ್ಲಿ ಒಂದು ಪ್ರತ್ಯೇಕ ಅಪಾರ್ಟ್‍ಮೆಂಟ್‍ನ ಮಾಲಕತ್ವ ಮತ್ತು ಅಂತಹ ಅಪಾರ್ಟ್‍ಮೆಂಟ್‍ಗೆ ಸಂಬಂಧಿಸಿದ ಸಾಮಾನ್ಯ ಪ್ರದೇಶಗಳಾದ ಮೆಟ್ಟಿಲು, ಬಾಲ್ಕನಿ, ಲಿಫ್ಟ್, ಟೆರೇಸ್, ಪಾರ್ಕ್, ಪ್ಲೇ ಏರಿಯಾ ಸೇರಿದಂತೆ ಇನ್ನಿತರೆ ಪ್ರದೇಶ ಮತ್ತು ಸೌಲಭ್ಯಗಳಲ್ಲಿ ಅವಿಭಜಿತ ಪಾಲನ್ನು ಹಂಚಲು ಕಾನೂನು ರೂಪಿಸಲಾಗಿದೆ. ಜೊತೆಗೆ ಅಪಾರ್ಟ್‍ಮೆಂಟ್‍ಗಳ ಆಡಳಿತ, ಸಾಮಾನ್ಯ ಪ್ರದೇಶಗಳು ಮತ್ತು ಅಪಾರ್ಟ್‍ಮೆಂಟ್ ಕಟ್ಟಡಗಳ ಸೌಲಭ್ಯಗಳ ಕಾರ್ಯಾಚರಣೆ ಮತ್ತು ಬಳಕೆಗೆ ಒಂದು ಕಾರ್ಯವಿಧಾನವನ್ನು ಒದಗಿಸುವುದು ಈ ಹೊಸ ಪ್ರಸ್ತಾಪಿತ ಮಸೂದೆಯ ಉದ್ದೇಶವಾಗಿದೆ.
ಈ ಮಸೂದೆಯಡಿ ಘೋಷಣಾ ಪತ್ರ ಅದಕ್ಕೆ ಮಾಡಿರುವ ಯಾವುದೇ ತಿದ್ದುಪಡಿ ಸಲ್ಲಿಸಲು ವಿಫಲರಾದರೆ, ಹಂಚಿಕೆದಾರರು ಸಂಘದ ರಚನೆಗೆ ಅನುಕೂಲ ಕಲ್ಪಿಸಲು ವಿಫಲರಾದರೆ, ಅಪಾರ್ಟ್‍ಮೆಂಟ್ ವರ್ಗಾವಣೆ ಪತ್ರ ಬರೆದುಕೊಡಲು ವಿಫಲವಾದರೆ, ಸಕ್ಷಮ ಪ್ರಾಧಿಕಾರದಿಂದ ಅಧಿಭೋಗ ಪ್ರಮಾಣಪತ್ರ ಪಡೆಯದೇ ಅಪಾರ್ಟ್‍ಮೆಂಟ್ ಸ್ವಾಧೀನವನ್ನು ಹಸ್ತಾಂತರಿಸಿದರೆ ಅಂಥವರಿಗೆ ದಂಡ ವಿಧಿಸಲಾಗುವುದು. ಸಕ್ಷಮ ಪ್ರಾಧಿಕಾರ ಪ್ರವರ್ತಕ, ಸಂಘ, ಅಪಾರ್ಟ್‍ಮೆಂಟ್ ಮಾಲಕರಿಗೆ ಗರಿಷ್ಠ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಉಲ್ಲಂಘನೆ ಮುಂದುವರಿಸಿದರೆ ಪ್ರತಿ ದಿನ 1000 ರೂ. ರಿಂದ 20,000 ರೂ. ವರೆಗೆ ಹೆಚ್ಚುವರಿ ದಂಡ ವಿಧಿಸಬಹುದಾಗಿದೆ.






