ಎಸ್ಡಿಎಫ್ ವತಿಯಿಂದ "ವಿದ್ಯಾಧನ್" ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವುದು ಹೇಗೆ? ಮಾಹಿತಿ ಇಲ್ಲಿದೆ

PC: x.com/IIITDelhi/photo
ಬೆಂಗಳೂರು, ಮೇ 24: ಸರೋಜಿನಿ ದಾಮೋದರನ್ ಫೌಂಡೇಶನ್ ವತಿಯಿಂದ 2025ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಫೌಂಡೇಷನ್ ಸಂಯೋಜಕಿ ಜೆಸ್ವಿನ್ ಮಾಹಿತಿ ನೀಡಿದರು.
ಶನಿವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ಹಿಂದುಳಿದ ಸಮುದಾಯಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯೊಂದಿಗೆ ಆರ್ಥಿಕ ಸಹಾಯವನ್ನು ನೀಡುತ್ತಿದೆ. 2014 ರಿಂದ ಇಲ್ಲಿಯವರೆಗೂ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.
ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು 2025ರಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎಲ್ಲ ವಿಷಯಗಳಲ್ಲಿ ಶೇ.90 ರಷ್ಟು (ಅಂಗವಿಕಲರಾದರೆ ಶೇ.75) ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು 2 ಲಕ್ಷ ರೂ.ಗಳಿಗಿಂತ ಕಡಿಮೆಯಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಪಿಯುಸಿ ಅಧ್ಯಯನಕ್ಕಾಗಿ ವರ್ಷಕ್ಕೆ 10 ಸಾವಿರ ರೂ. ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ಪದವಿ ಕೋರ್ಸ್ ಗಳಿಗೆ ವಾರ್ಷಿಕ 15 ಸಾವಿರ ರೂ. ಗಳಿಂದ 75 ಸಾವಿರ ರೂ.ಗಳ ವರೆಗೂ ಆರ್ಥಿಕ ಸಹಾಯ ಸಿಗುತ್ತದೆ ಎಂದು ಅವರು ತಿಳಿಸಿದರು.
ಆನ್ಲೈನ್ ಅರ್ಜಿಗಳನ್ನು ವೆಬ್ಸೈಟ್ www.vidyadhan.org ಮೂಲಕ ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ 'SDF Vidya' ಆಪ್ ಮೂಲಕ ಜು.8ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ, ವಿದ್ಯಾರ್ಥಿಗಳು 80683 33500 ಸಂಖ್ಯೆಗೆ ಕರೆ ಮಾಡಬಹುದು ಎಂದು ಜೆಸ್ವಿನ್ ಹೇಳಿದರು.







