ʼಪರಿಶಿಷ್ಟರ ಕಾಲನಿಗಳಲ್ಲಿಯೇ ಹೆಚ್ಚು ಮದ್ಯ ಸೇವಿಸುತ್ತಾರೆʼ : ಆರಗ ಜ್ಞಾನೇಂದ್ರ ಹೇಳಿಕೆಗೆ ಕಾಂಗ್ರೆಸ್ ಸದಸ್ಯರ ಆಕ್ಷೇಪ

ಬೆಂಗಳೂರು : ಕಿರಾಣಿ ಅಂಗಡಿಗೆ ಮದ್ಯ ಸರಬರಾಜಾಗುತ್ತಿದ್ದು, ಇದನ್ನು ತಡೆಯಬೇಕು ಎಂಬ ಚರ್ಚೆ ವೇಳೆ ಬಿಜೆಪಿ ಹಿರಿಯ ಸದಸ್ಯ ಆರಗ ಜ್ಞಾನೇಂದ್ರ ಪರಿಶಿಷ್ಟರ ಕಾಲನಿಗಳಲ್ಲಿ ಜನರು ಹೆಚ್ಚು ಮದ್ಯವ್ಯಸನಿಗಳಾಗುತ್ತಿದ್ದಾರೆ ಎಂದಾಗ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯ ಅನಧಿಕೃತ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ವಿಚಾರ ಪ್ರತಿಧ್ವನಿಸಿತು. ಕಾಂಗ್ರೆಸ್ ಶಾಸಕ ಕೌಜಲಗಿ ಮಹಾಂತೇಶ್ ಶಿವಾನಂದ್ ಅವರ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವಂತೆ ಆಗ್ರಹಿಸಿದರು.
ಚರ್ಚೆ ವೇಳೆ ಬಿಜೆಪಿಯ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕಿರಾಣಿ ಅಂಗಡಿಗೆ ಮದ್ಯ ಸರಬರಾಜಾಗುತ್ತಿವೆ. ಇದನ್ನು ತಡೆಯಬೇಕು. ಎಸ್ಸಿ ಕಾಲೋನಿಗಳಲ್ಲಿ ಜನರು ಹೆಚ್ಚು ಮದ್ಯವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಯಲು ಕಾನೂನು ರೀತಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದಕ್ಕೆ ಆಕ್ಷೇಪವೆತ್ತಿದ ಆಡಳಿತ ಪಕ್ಷದ ಶಾಸಕ ಎನ್.ನಾರಾಯಣಸ್ವಾಮಿ, ಎಸ್ಸಿ, ಎಸ್ಟಿಯವರು ಮಾತ್ರ ಕುಡಿಯುತ್ತಾರಾ?, ನೀವು ಕುಡಿಯುವುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.





