ಧರ್ಮಸ್ಥಳ ಪ್ರಕರಣ | ತಾರ್ಕಿಕ ಅಂತ್ಯ ಕಾಣುವುದರಲ್ಲಿ ಅನುಮಾನ ಬೇಡ : ಎ.ಎಸ್.ಪೊನ್ನಣ್ಣ

ಬೆಂಗಳೂರು, ಸೆ.18 : ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ(ಎಸ್‍ಐಟಿ) ತನಿಖೆ ಮತ್ತಷ್ಟು ಚುರುಕುಗೊಳಿಸಿದ್ದು, ಈ ಪ್ರಕರಣದಲ್ಲಿ ತಾರ್ಕಿಕ ಅಂತ್ಯ ಕಾಣುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಗುರುವಾರ ಬೆಂಗಳೂರು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಈ ತನಿಖೆ ಅಂತಿಮಗೊಂಡ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಕೆಯಾಗಲಿದ್ದು ತಾರ್ಕಿಕ ಅಂತ್ಯ ಕಾಣುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಪ್ರಕರಣದಲ್ಲಿ ಸರಕಾರದ ಹಸ್ತಕ್ಷೇಪವಿಲ್ಲದೇ ಎಸ್‍ಐಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಪ್ರಾರಂಭದಲ್ಲಿ ಎಸ್‍ಐಟಿ ತನಿಖೆಗೆ ಧರ್ಮಸ್ಥಳ ಧರ್ಮಾಧಿಕಾರಿ ಮತ್ತು ಬಿಜೆಪಿ ನಾಯಕರು ಸ್ವಾಗತಿಸಿದ್ದರು. ಆದರೆ, ಇದೀಗ ರಾಜಕೀಯವಾಗಿ ಧರ್ಮದ ಬಣ್ಣ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಯಾರೇ ದಾರಿ ತಪ್ಪಿಸಿದ್ದರೂ ತನಿಖೆ ಮೂಲಕ ಸತ್ಯ ಹೊರ ಬರಲಿದೆ. ಇದರ ವರದಿ ಬಂದ ಬಳಿಕ ಸಾರ್ವಜನಿಕ ಚರ್ಚೆಯಾಗಬೇಕು ಹೊರತು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರಕಾರದ ಎಲ್ಲ ರೀತಿಯ ತನಿಖಾ ಅಸ್ತ್ರಗಳನ್ನು ಬಳಸಿದರೂ ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ ಎಂದು ವರದಿ ಬಂದಿದೆ. ವಾಲ್ಮೀಕಿ, ಮುಡಾ ಪ್ರಕರಣಗಳು ಕೇವಲ ಮಾತಿಗಷ್ಟೇ ಹಗರಣಗಳಾಗಿವೆ ಎಂದು ಅವರು ಉಲ್ಲೇಖಿಸಿದರು.
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಲಿ ಎಂದು ಕೆಲವರು ರಾಜಕೀಯವಾಗಿ ಆರೋಪ ಮಾಡುತ್ತಾರೆ. ಆದರೆ ಸಮಾಜದ ದೃಷ್ಟಿಯಿಂದ ರಾಜ್ಯಕ್ಕೆ ಬರಬೇಕಾದ ಅನುದಾನ, ಜಿಎಸ್ಟಿ ಮೊದಲಾದ ಅಭಿವೃದ್ಧಿ ವಿಚಾರಗಳ ಬಗ್ಗೆ ಯಾರು ಚರ್ಚೆ ಮಾಡುವುದಿಲ್ಲ. ರಾಜಕಾರಣದಲ್ಲಿ ಸರಿ-ತಪ್ಪು ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು. ಕಾನೂನು ಹೋರಾಟದ ಜೊತೆಗೆ ಜನಾಭಿಪ್ರಾಯ ರೂಪಿಸುವ ಶಕ್ತಿ ಬೆಳೆಸಿಕೊಂಡಾಗ ಮಾತ್ರ ರಾಜಕೀಯದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ನನ್ನ ವಿರುದ್ಧವೂ ಕಾರ್ಯಕರ್ತನೊಬ್ಬನ ಸುಳ್ಳು ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿಯವರು ದಾಖಲಿಸಿದ್ದರು. ಆದರೆ, ಆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದ ಅವರು, ರಾಜ್ಯ ಸರಕಾರ ಒಳಮೀಸಲಾತಿ, ಜಾತಿಗಣತಿ, ಕೃಷ್ಣ ಮೇಲ್ದಂಡೆ ಯೋಜನೆ ಸೇರಿ ಕೆಲವು ವಿಚಾರಗಳಲ್ಲಿ ದೃಢ ಸಂಕಲ್ಪದೊಂದಿಗೆ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದೆ. ಆದರೂ ಕೆಲವು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದು ಇದಕ್ಕೆ ಕಾನೂನು ಹೋರಾಟ ಅನಿವಾರ್ಯ ಎಂದರು.
ಸಂವಾದದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸೇರಿದಂತೆ ಪ್ರಮುಖರಿದ್ದರು.







