ಮೈಸೂರು ದಸರಾದಲ್ಲಿ ಕಂಬಳಕ್ಕೆ ಸರಕಾರ ಸಮ್ಮತಿ : ಅಶೋಕ್ ರೈ

ಬೆಂಗಳೂರು : ನಾಡ ಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಕಂಬಳ ಕ್ರೀಡೆ ಆಯೋಜನೆಗೂ ರಾಜ್ಯ ಸರಕಾರ ಸಮ್ಮತಿ ಸೂಚಿಸಿದೆ ಎಂದು ಕಾಂಗ್ರೆಸ್ ಶಾಸಕ ಅಶೋಕ್ ರೈ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಹಬ್ಬ ದಸರಾ- 2026 ಆಚರಣೆ ಸಂಬಂಧ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕಂಬಳ ಆಯೋಜನೆ ಕುರಿತು ಚರ್ಚೆ ನಡೆಸಲಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ ಎಂದರು.
ಮೈಸೂರು ದಸರಾ ಎನ್ನುವುದು ಇಡೀ ನಾಡಿಗೆ ಸಂಬಂಧಿಸಿದ್ದು, ದಸರಾವನ್ನು ಮಂಗಳೂರಿನಲ್ಲೂ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಹೀಗಿರುವಾಗ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ. ಇದಕ್ಕೆ ಯಾರ ಆಕ್ಷೇಪಣೆಯೂ ಇಲ್ಲ ಎಂದು ಹೇಳಿದರು.
ಮೈಸೂರಿನ ರಿಂಗ್ ರಸ್ತೆಯ ಬಳಿ ಕಂಬಳ ಕ್ರೀಡೆ ಆಯೋಜನೆ ಮಾಡುವ ಸಂಬಂಧ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದ ಅವರು, ಮೈಸೂರಿನ ಸಂಸದರು ಸಹ ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಕಂಬಳ ಕುರಿತು ವಿರೋಧ ವ್ಯಕ್ತಪಡಿಸಲಿಲ್ಲ ಎಂದರು.






