ಪ್ರಧಾನಿ ಮೋದಿ ಕಾರ್ಯಕ್ರಮ: ಅಶೋಕ್ ಹೆಸರು ಕೈಬಿಟ್ಟು, ಬಿ.ವೈ.ವಿಜಯೇಂದ್ರಗೆ ಆಹ್ವಾನ!

ಬೆಂಗಳೂರು: ಪ್ರಧಾನಿ ಮೋದಿ ರವಿವಾರ(ಆ.10) ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ ಆಗಮಿಸಲಿದ್ದು, ಈ ವೇಳೆ ಅಧಿಕೃತ ಕಾರ್ಯಕ್ರಮಕ್ಕೆ ವಿಪಕ್ಷದ ನಾಯಕ ಆರ್. ಅಶೋಕ್ ಹೆಸರು ಕೈಬಿಟ್ಟು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಆಹ್ವಾನ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಶಿಷ್ಟಾಚಾರವನ್ನು ಉಲ್ಲಂಘಿಸಿ, ಬೆಂಗಳೂರಿನ ಶಾಸಕರೂ ಆಗಿರುವ ವಿಪಕ್ಷ ನಾಯಕನನ್ನೇ ಕಡೆಗಣಿಸಿ, ಶಿಕಾರಿಪುರದ ಶಾಸಕರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಆಹ್ವಾನ ನೀಡಿರುವುದಕ್ಕೆ ಬಿಜೆಪಿ ನಾಯಕರೇ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಸರಕಾರಿ ಕಾರ್ಯಕ್ರಮಗಳ ಶಿಷ್ಟಾಚಾರದ ಪ್ರಕಾರ, ವಿರೋಧ ಪಕ್ಷದ ನಾಯಕನಿಗೆ ಪ್ರಮುಖ ಸ್ಥಾನಮಾನವಿದೆ. ಅದರಲ್ಲೂ, ಬೆಂಗಳೂರಿನಲ್ಲಿಯೇ ಕಾರ್ಯಕ್ರಮ ನಡೆಯುತ್ತಿರುವಾಗ, ಸ್ಥಳೀಯ ಶಾಸಕರೂ ಆಗಿರುವ ಆರ್.ಅಶೋಕ್‍ಗೆ ಆಹ್ವಾನ ನೀಡುವುದು ಕಡ್ಡಾಯವಾಗಿತ್ತು. ಆದರೆ, ಅವರನ್ನು ಕಡೆಗಣಿಸಿ, ಪಕ್ಷದ ರಾಜ್ಯಾಧ್ಯಕ್ಷರಾದರೂ ಬೆಂಗಳೂರಿಗೆ ಸಂಬಂಧಿಸದ ಶಾಸಕರಾದ ವಿಜಯೇಂದ್ರ ಅವರಿಗೆ ಮಣೆ ಹಾಕಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ.





