ಕರ್ನಾಟಕದ ಸರಕಾರಿ ಶಾಲೆಗಳ ದುಃಸ್ಥಿತಿ ಸರಿಪಡಿಸಲು CJP ಸಹ ಸಂಚಾಲಕ ಅಶುತೋಷ್ ರಾಂಕ ಆಗ್ರಹ

ಬೆಂಗಳೂರು : ಕರ್ನಾಟಕದ ಸರಕಾರಿ ಶಾಲೆಗಳು ದುಃಸ್ಥಿತಿಯಲ್ಲಿದ್ದು, ಅಪಾಯ ಉಂಟಾಗುವ ಮೊದಲೇ ಸರಕಾರ ಸರಿಪಡಿಸಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿಯ(ಸಿಜೆಪಿ) ಸಹ ಸಂಚಾಲಕ ಅಶುತೋಷ್ ರಾಂಕ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಜೆಪಿ ತಂಡವು ರಾಜ್ಯದ ಸುಮಾರು 50 ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎರಡು ದಿನಗಳಲ್ಲಿ ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ವರ್ತೂರಿನ ಸರಕಾರಿ ಉರ್ದು ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಒಂದೊಂದೆ ತುಂಡುಗಳು ಬೀಳುತ್ತಿರುವುದನ್ನು ಕಂಡೆವು. ನಮ್ಮ ಭೇಟಿಯ ನಂತರ ದುರಸ್ತಿಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಈ ರೀತಿ ಇರುವ ಎಲ್ಲ ಶಾಲೆಗಳಲ್ಲಿ ಅಪಾಯ ಉಂಟಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಸರ್ಜಾಪುರದ ಶಾಲೆಗೆ ಭೇಟಿ ನೀಡಿದಾಗ ಅಲ್ಲಿಯ 9 ಶಿಕ್ಷಕರಲ್ಲಿ ಎಂಟು ಮಂದಿಯನ್ನು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಜೆ.ಪಿ.ನಗರ ಶಾಲೆಗೆ ಭೇಟಿ ನೀಡಿದಾಗ ಅಲ್ಲಿ ಮೂಲಸೌಕರ್ಯ ಪರವಾಗಿಲ್ಲ ಎಂಬಂತಿತ್ತು. ಆದರೆ, ಶೌಚಾಲಯ ಸ್ವಲ್ಪವೂ ಸ್ವಚ್ಛವಾಗಿರಲಿಲ್ಲ. ಇದೇ ರೀತಿ ಇನ್ನೊಂದು ಶಾಲೆಯಲ್ಲಿಯೂ ನೈರ್ಮಲ್ಯ ಇರಲಿಲ್ಲ ಎಂದು ಅವರು ತಿಳಿಸಿದರು.
ಶಾಲೆಗಳಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಯ ಕೊರತೆ ಇದೆ. ಇರುವವರನ್ನು ಬೇರೆ ಕೆಲಸಕ್ಕೆ ನಿಯೋಜನೆ ಮಾಡಿದರೆ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಕೊರತೆ ನೀಗಿಸಲು ಕ್ರಮ ವಹಿಸಬೇಕು. ಬೇರೆ ಕೆಲಸಕ್ಕೆ ನಿಯೋಜಿಸಬಾರದು. ದುಃಸ್ಥಿತಿಯಲ್ಲಿರುವ ಕಟ್ಟಡಗಳನ್ನು ಸರಿಪಡಿಸಬೇಕು. ಮುಖ್ಯವಾಗಿ ಶೌಚಾಲಯದ ಸ್ವಚ್ಛತೆಗಾಗಿ ಸಿಬ್ಬಂದಿಯನ್ನು ನೇಮಕ ಮಾಡಬೇಕು. ನಿರ್ವಹಣೆಗೆ ಒತ್ತು ನೀಡಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ವಿವರಿಸಿದ್ದೇವೆ. ಈ ಬಗ್ಗೆ ಕ್ರಮ ವಹಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್) ಯೋಜನೆಯ ಬಗ್ಗೆ ಸಚಿವರು ವಿವರಿಸಿದ್ದು, 2 ಸಾವಿರಕ್ಕೂ ಅಧಿಕ ಮಾದರಿ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸುತ್ತಿರುವ ಬಗ್ಗೆ ತಿಳಿಸಿದರು. ಈ ಯೋಜನೆಯನ್ನು ಸಿಜೆಪಿ ಸ್ವಾಗತಿಸಿದೆ ಎಂದು ಅಶುತೋಷ್ ರಾಂಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅಫ್ರೀನ್ ನವಾಜ್, ಪದಾಧಿಕಾರಿ ಅನಿತಾ, ವೈದ್ಯ ಡಾ.ಪೂರ್ಣಾನಂದ ಉಪಸ್ಥಿತರಿದ್ದರು.






