ವಿಧಾನಸಭೆ ಅಧಿವೇಶನ: ಗೈರಾಗದಂತೆ ಸಚಿವರಿಗೆ ಪತ್ರ ಬರೆದ ಸಿಎಂ

ಬೆಂಗಳೂರು: ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸಚಿವರು ಗೈರಾಗುತ್ತಿರುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಸಂಪುಟದ ಎಲ್ಲಾ ಸಚಿವರಿಗೆ ಪತ್ರ ಬರೆದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಧಿವೇಶನದ ವೇಳೆ ಸಚಿವರು ಸದನದಲ್ಲಿ ಹಾಜರಿರದಿರುವ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದರಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರುಗಳು ಸದನದ ಕಾರ್ಯಕಲಾಪಗಳ ಸಮಯದಲ್ಲಿ ಗೈರಾಗಿರುವುದು ಸೂಕ್ತವಲ್ಲ ಎಂದು ಸಿಎಂ ಪತ್ರದಲ್ಲಿ ಸ್ಪಷ್ಟಪಡಿಸಿರುವುದಾಗಿ ತಿಳಿದುಬಂದಿದೆ. ಅಧಿವೇಶನ ನಡೆಯುವ ಅವಧಿಯಲ್ಲಿ ಯಾವುದೇ ಸಭೆ, ಸಮಾರಂಭ ಅಥವಾ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ, ಎಲ್ಲ ಸಚಿವರು ಖುದ್ದಾಗಿ ಸದನದಲ್ಲಿ ಹಾಜರಿರಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
ಉಭಯ ಸದನಗಳ ಕಾರ್ಯಕಲಾಪಗಳ ವೇಳೆ ಸಚಿವರು ತಮ್ಮ ಕರ್ತವ್ಯ ಇರುವ ಸದನದಲ್ಲಿ (ವಿಧಾನಸಭೆ ಅಥವಾ ವಿಧಾನ ಪರಿಷತ್ತು) ಸ್ವತಃ ಹಾಜರಿದ್ದು, ಸದನದ ಘನತೆ ಹಾಗೂ ಗೌರವವನ್ನು ಕಾಪಾಡುವುದು ಎಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.







