ಎಟಿಎಂ ವಾಹನ ದರೋಡೆ ಪ್ರಕರಣ; 8 ಮಂದಿಯ ಬಂಧನ, 5.30 ಕೋಟಿ ರೂ. ವಶ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ಎಟಿಎಂ ಹಣ ದರೋಡೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಬೆಂಗಳೂರು ಪೊಲೀಸರು ಆಂಧ್ರಪ್ರದೇಶ, ಚಿತ್ತೂರು, ತಿರುಪತಿ ಹಾಗೂ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ಕೈಗೊಂಡು ಈವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿ ದರೋಡೆಗೀಡಾದ ಒಟ್ಟು ಹಣದಲ್ಲಿ 5.30 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಬಂಧಿತ 8 ಆರೋಪಿಗಳಲ್ಲಿ ಸಿಎಂಎಸ್ ಏಜೆನ್ಸಿಯ ನಾಲ್ಕು ಜನ ಸಿಬ್ಬಂದಿ, ಪ್ರಕರಣದ ಸೂತ್ರಧಾರ ಗೋವಿಂದಪುರ ಠಾಣೆಯ ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್, ಮುಖ್ಯ ಸಹಾಯಕ ಝೇವಿಯರ್ ಮತ್ತು ದರೋಡೆಗೆ ಬಳಸಲಾಗಿದ್ದ ಕಾರನ್ನು ನೀಡಿದ್ದ ಕಲ್ಯಾಣ ನಗರದ ಇಬ್ಬರು ಸೇರಿದ್ದಾರೆ. ಎಲ್ಲ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ದರೋಡೆಯಾದ ಉಳಿದ ಹಣ ಚೆನ್ನೈ ಕಡೆಗೆ ಸಾಗಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣದ ಹಿಂದಿನ ಸೂತ್ರಧಾರ ಗೋವಿಂದಪುರ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂಬುದಾಗಿ ಗೊತ್ತಾದ ಬೆನ್ನಲ್ಲೇ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ನಗರದಲ್ಲಿ ಅಣ್ಣಪ್ಪನನ್ನು ಬಂಧಿಸಿದ್ದಾರೆ. ಆತನ ಜೊತೆಗೆ ಸಿಎಂಎಸ್ ಏಜೆನ್ಸಿಯ ಹಣ ಸಾಗಾಟದ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ಆಂತರಿಕ ಮಾಹಿತಿ ಹೊಂದಿದ್ದ ಮಾಜಿ ಉದ್ಯೋಗಿ ಝೇವಿಯರ್ ಸಹ ಬಂಧಿತನಾಗಿದ್ದಾನೆ. ಝೇವಿಯರ್ ಒಂದು ವರ್ಷದ ಹಿಂದೆ ಸಿಎಂಎಸ್‍ನಿಂದ ಕೆಲಸ ಬಿಟ್ಟಿದ್ದ ಎನ್ನಲಾಗಿದೆ.
ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾನ್‍ಸ್ಟೇಬಲ್ ಅಪ್ಪಣ್ಣ ಕೆಲಸವಿಲ್ಲದ ಸಮಯದಲ್ಲಿ ಝೇವಿಯರ್ ನನ್ನು ಭೇಟಿಯಾಗುತ್ತಿದ್ದ. ಈ ಸಂದರ್ಭದಲ್ಲಿ, ಝೇವಿಯರ್ ಸಿಎಂಎಸ್ ಏಜೆನ್ಸಿಯ ಹಣ ಸಾಗಾಟದ ಸೂಕ್ಷ್ಮ ವಿವರಗಳನ್ನು ಕಾನ್‍ಸ್ಟೇಬಲ್‍ಗೆ ತಿಳಿಸಿದ್ದು, ಇಬ್ಬರೂ ಸೇರಿ ದರೋಡೆಗೆ ಸಂಚು ರೂಪಿಸಿದರು. ಝೇವಿಯರ್ ಸಿಎಂಎಸ್‍ನ ಆಂತರಿಕ ಸಂಚನ್ನು ನೋಡಿಕೊಂಡರೆ, ಅಣ್ಣಪ್ಪ ಪರಾರಿಯಾಗುವ ಬಗ್ಗೆ ಸಂಚು ರೂಪಿಸುವ ಜವಾಬ್ದಾರಿ ಹಂಚಿಕೊಂಡಿದ್ದರು ಎನ್ನಲಾಗಿದೆ.
ದರೋಡೆ ನಡೆದ ಸ್ಥಳದಲ್ಲಿ ಮುಖ್ಯ ಆರೋಪಿಗಳಾದ ಅಣ್ಣಪ್ಪ ಮತ್ತು ಝೇವಿಯರ್ ಇರಲಿಲ್ಲ. ಬದಲಾಗಿ, ಅವರು ದೂರದಿಂದಲೇ ಕಾರ್ಯಾಚರಣೆಯನ್ನು ನಿಯಂತ್ರಿಸಿದ್ದರು. ಅಣ್ಣಪ್ಪ ನಾಯ್ಕ್ ಕಮ್ಮನಹಳ್ಳಿ ಮತ್ತು ಕಲ್ಯಾಣನಗರದ ಯುವಕರ ತಂಡವನ್ನು ಸಂಘಟಿಸಿ, ದರೋಡೆ ನಡೆಸಲು ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ಸಮಗ್ರ ತರಬೇತಿಯನ್ನು ನೀಡಿದ್ದ. ಪೊಲೀಸರ ಕಾರ್ಯವೈಖರಿ ಹೇಗಿರುತ್ತದೆ ಎಂಬುದರ ಬಗ್ಗೆಯೂ ಆತ ಈ ತಂಡಕ್ಕೆ ಮಾಹಿತಿ ನೀಡಿದ್ದ ಎಂದು ತಿಳಿದುಬಂದಿದೆ.
ಸೂತ್ರಧಾರಿ ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್ ಸಿಕ್ಕಿದ್ದೇಗೆ?: ಈ ಪ್ರಕರಣದ ಜಾಡು ಹಿಡಿದು ಹೊರಟ ಬೆಂಗಳೂರು ಪೊಲೀಸರು ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮೂವರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದಾಗ ಅವರು ಕಾನ್‍ಸ್ಟೇಬಲ್ ಅಪ್ಪಣ್ಣ ನಾಯ್ಕ್ ಹೆಸರನ್ನು ಪೊಲೀಸರ ಮುಂದೆ ತಿಳಿಸಿದ್ದಾರೆ. ‘ನಮಗೆ ದರೋಡೆಯ ನಂತರ ಹೇಗೆ ತಪ್ಪಿಸಿಕೊಳ್ಳಬೇಕು, ಹಣವನ್ನು ಎಲ್ಲಿ ಸಾಗಿಸಬೇಕು’ ಎಂಬುದನ್ನು ಅಪ್ಪಣ್ಣನೇ ಹೇಳಿಕೊಟ್ಟಿದ್ದು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ ತಕ್ಷಣವೇ ಬೆಂಗಳೂರು ನಗರದಲ್ಲಿ ಅಪ್ಪಣ್ಣನನ್ನು ಬಂಧಿಸಲಾಗಿದೆ.
‘ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ಕೆಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವಿವರದ ಬಗ್ಗೆ ನಾನು ಇಲ್ಲಿ ಹೇಳಿದರೆ ಉಳಿದ ಆರೋಪಿಗಳು ಎಚ್ಚರವಾಗುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದ ಯಾರನ್ನೂ ಬಿಡುವುದಿಲ್ಲ, ಹಿಡಿದು ಹಾಕ್ತೇವೆ’
-ಡಾ.ಜಿ.ಪರಮೇಶ್ವರ್, ಗೃಹ ಸಚಿವ.







