‘ಫಾರಂ 7’ ಆಕ್ಷೇಪದ ಮೂಲಕ ಮತದಾರರ ಹಕ್ಕು ಕಸಿಯುವ ಯತ್ನ ಸಹಿಸಲ್ಲ: ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ
ಅಕ್ರಮ ಎಸಗಿದರೆ FIR; ಆಕ್ಷೇಪಗಳ ಸಂಪೂರ್ಣ ವಿವರ ನೀಡುವಂತೆ CEOಗೆ ಸೂಚನೆ

ಡಿ.ಕೆ. ಶಿವಕುಮಾರ್
ಬೆಂಗಳೂರು: ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ‘ಫಾರಂ-7’ ಮೂಲಕ ಸಲ್ಲಿಸಲಾಗುತ್ತಿರುವ ಆಕ್ಷೇಪಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ, ಅರ್ಹ ಪ್ರತಿಯೊಬ್ಬ ಮತದಾರನ ಮತದಾನದ ಹಕ್ಕನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಹಾಗೂ ಇತರ ಹಿಂದುಳಿದ ಸಮುದಾಯಗಳ ಮತಗಳನ್ನು ಗುರಿಯಾಗಿಸಿ ಸಾಮೂಹಿಕ ಆಕ್ಷೇಪಗಳನ್ನು ಸಲ್ಲಿಸಲಾಗುತ್ತಿರಬಹುದು ಎಂಬ ಆತಂಕವಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಸಲ್ಲಿಕೆಯಾಗಿರುವ ಆಕ್ಷೇಪಗಳ ಸಂಪೂರ್ಣ ವಿವರ ನೀಡುವಂತೆ ಮುಖ್ಯ ಚುನಾವಣಾ ಅಧಿಕಾರಿ (CEO) ಅವರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
‘ಫಾರಂ 7’ರ ಅಡಿಯಲ್ಲಿ ಸಲ್ಲಿಸಲಾದ ಎಲ್ಲ ಆಕ್ಷೇಪಣೆಗಳ ಸಂಖ್ಯೆ, ನಿಗದಿತ ಕಾರಣ ಅಥವಾ ಅಗತ್ಯ ವಿವರಗಳನ್ನು ನೀಡದೆ ಮತದಾರರ ಹೆಸರು ತೆಗೆದುಹಾಕುವಂತೆ ಸಲ್ಲಿಸಿರುವ ಆಕ್ಷೇಪಗಳು ಸೇರಿದಂತೆ ಕ್ಷೇತ್ರವಾರು ವಿವರ ನೀಡುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಮತದಾರರ ವಿವರಗಳನ್ನು ಪೂರ್ವ ಮುದ್ರಿಸಿರುವ ಅರ್ಜಿಗಳ ಮೂಲಕ ಆಕ್ಷೇಪ ಸಲ್ಲಿಸಿರುವುದು ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಹಾಳು ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿರಬಹುದೆಂಬ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಶಿವಕುಮಾರ್ ಹೇಳಿದ್ದಾರೆ.
ಅಕ್ರಮ ಎಸಗಿದರೆ FIR ಎಚ್ಚರಿಕೆ
ಮತದಾರರ ಪಟ್ಟಿಯನ್ನು ತಿರುಚುವ ಅಥವಾ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಕೋಮು ಬಣ್ಣ ನೀಡುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆಯೂ ಸೂಚಿಸಿರುವುದಾಗಿ ಶಿವಕುಮಾರ್ ತಿಳಿಸಿದ್ದಾರೆ. ದಾಖಲಿಸಲಾಗುವ ಎಫ್ಐಆರ್ ಗಳ ಪ್ರತಿಗಳನ್ನು ಮುಖ್ಯ ಕಾರ್ಯದರ್ಶಿಗೆ ಕಳುಹಿಸುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಚುನಾವಣಾ ಪ್ರಕ್ರಿಯೆ ಪಾರದರ್ಶಕ ಹಾಗೂ ನ್ಯಾಯಯುತವಾಗಿರಬೇಕು. ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುವ ಯಾವುದೇ ಪ್ರಯತ್ನಗಳಿಗೆ ಅವಕಾಶ ಇರಬಾರದು ಎಂದು ಅವರು ಹೇಳಿದ್ದಾರೆ.






