6 ಸಾವಿರ ಕೋಟಿ ರೂ.ಹೂಡಿಕೆಗೆ ಆ್ಯಕ್ಸಿಸ್‍ಕೇಡ್ಸ್ ಏರೊಸ್ಪೇಸ್ ಒಲವು: ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು: ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಬೆಂಗಳೂರು ಮೂಲದ ಆ್ಯಕ್ಸಿಸ್‍ಕೇಡ್ಸ್ ಏರೊಸ್ಪೇಸ್ ಇನ್‍ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ರಾಜ್ಯದಲ್ಲಿ ಆರು ಸಾವಿರ ಕೋಟಿ ರೂಪಾಯಿ ಮೊತ್ತದ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ಖನಿಜ ಭವನದಲ್ಲಿ ಕಂಪೆನಿಯ ಉನ್ನತಾಧಿಕಾರಿಗಳ ಜೊತೆಗೆ ನಡೆದ ವಿಸ್ತೃತ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಪಾಟೀಲ್, ‘200 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ(ಎಐ) ನಾವೀನ್ಯತೆ ಕ್ಷೇತ್ರಗಳಲ್ಲಿ ಉತ್ಪಾದನೆ, ಪರೀಕ್ಷೆ ಮತ್ತು ನಿರ್ವಹಣೆಯ ಸಮಗ್ರ ಕೇಂದ್ರ ಸ್ಥಾಪಿಸುವುದು ಆ್ಯಕ್ಸಿಸ್‍ಕೇಡ್ಸ್ ಏರೊಸ್ಪೇಸ್‍ನ ಮುಖ್ಯ ಉದ್ದೇಶವಾಗಿದೆ. ಜಾಗತಿಕ ಪಾಲುದಾರಿಕೆಯಡಿ ದೇಶೀಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನೂ ಸ್ಥಾಪಿಸಲಿದೆ ಎಂದರು.
ಈ ಕಂಪೆನಿಯು ಹಂತ-ಹಂತವಾಗಿ ಒಟ್ಟು 6 ಸಾವಿರ ಕೋಟಿ ರೂ.ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ರಾಜ್ಯದಲ್ಲಿ ಪ್ರತ್ಯಕ್ಷವಾಗಿ 20ಸಾವಿರ ಹಾಗೂ ಪರೋಕ್ಷವಾಗಿ 54 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಕ್ಷಿಪಣಿ ತಯಾರಿಕೆಯ ಪೂರಕ ಸೌಲಭ್ಯ, ರೇಡಾರ್-ಸಂವೇದಕ, ಯುದ್ಧ ವಿಮಾನಗಳ ದುರಸ್ತಿ-ನಿರ್ವಹಣೆ ಸೌಲಭ್ಯ(ಎಂಆರ್‍ಒ) ಸೇರಿದಂತೆ ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಂಪನಿ ಉದ್ದೇಶಿಸಿದೆ ಎಂದು ಅವರು ಮಾಹಿತಿ ನೀಡಿದರು.
ಮೊದಲ ಹಂತದಲ್ಲಿ 1,290 ಕೋಟಿ ರೂ., 2ನೆ ಹಂತದಲ್ಲಿ 2,898 ಕೋಟಿ ರೂ. ಮತ್ತು 3ನೇ ಹಂತದಲ್ಲಿ 1,512 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಲಿದೆ. ಈ ಯೋಜನೆ ಕಾರ್ಯಗತಗೊಳಿಸಲು ಕಂಪೆನಿಯು ದೇವನಹಳ್ಳಿ ಬಳಿ ಭೂಮಿ ಒದಗಿಸಲು ಮನವಿ ಮಾಡಿಕೊಂಡಿದೆ. 1.8ಕಿ.ಮೀ ಉದ್ದದ ರನ್ ವೇ ನಿರ್ಮಾಣದ ಉದ್ದೇಶವೂ ಇದೆ ಎಂದು ಕಂಪೆನಿ ಹೇಳಿದ್ದು, ಹಾಗಾದರೆ ಹಾಸನ, ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳನ್ನು ಬೇಕಾದರೂ ಪರಿಗಣಿಸಬಹುದು ಎಂದು ಅವರು ಸಲಹೆ ನೀಡಿದರು.
ಹಾಲಿ ಇರುವ ದೇವನಹಳ್ಳಿ ಘಟಕದ ಸಮೀಪದಲ್ಲೇ ಈ ಉದ್ದೇಶಿತ ಘಟಕ ಇರಬೇಕು ಎನ್ನುವ ಬೇಡಿಕೆಯನ್ನು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು. ಅನಂತರ ಪ್ರತಿಕ್ರಿಯಿಸಿದ ಸಚಿವ ಪಾಟೀಲ್, ರನ್ ವೇ ನಿರ್ಮಾಣಕ್ಕೂ ಅನುಕೂಲ ಇರುವ ಕಡೆ ಜಾಗ ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯಲ್, ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್, ಆಕ್ಸಿಸ್‍ಕೇಡ್ಸ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಶಾರಧಿ ಚಂದ್ರಬಾಬು, ನಿರ್ದೇಶಕ ಸುರೇಶ ಕುಮಾರ್, ಪ್ರಧಾನ ವ್ಯವಸ್ಥಾಪಕ(ಪ್ರಾಜೆಕ್ಟ್ಸ್) ಎನ್.ಕೆ.ಸತೀಶಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.






