ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಶೀಘ್ರದಲ್ಲಿಯೇ ವಾರ್ಷಿಕ 30 ಸಾವಿರ ಸ್ಕಾಲರ್ ಶಿಪ್ ಜಾರಿ: ಸಚಿವ ಡಾ.ಎಂ.ಸಿ.ಸುಧಾಕರ್

ಬೆಂಗಳೂರು: ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಐಟಿಐ ಅಥವಾ ಪದವಿ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳಿಗೆ ವಾರ್ಷಿಕ 30ಸಾವಿರ ರೂ.ಗಳ ಸ್ಕಾಲರ್ ಶಿಪ್ ನೀಡುವ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಕಟಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆವತಿಯಿಂದ ಭಾರತ ರತ್ನ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಸರಕಾರಿ ಶಾಲೆಯಲ್ಲಿ 10ನೆ ತರಗತಿ ಮತ್ತು ಪಿಯುಸಿಯಲ್ಲಿ ವ್ಯಾಸಂಗ ಮಾಡಿರುವ ಸುಮಾರು 36 ಸಾವಿರ ಹೆಣ್ಣುಮಕ್ಕಳಿಗೆ ಯಾವುದೇ ಐಟಿಐ ಅಥವಾ ಪದವಿ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಪ್ರತಿ ವರ್ಷ ಸುಮಾರು 30 ಸಾವಿರ ರೂಪಾಯಿ ಸ್ಕಾಲರ್ ಶಿಪ್ ನೀಡುವ ಹೊಸ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ, ನಮ್ಮ ಸರಕಾರ ಬಂದ ಮೇಲೆ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಶಾಲಾ ಕೊಠಡಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ 800 ಕೆಪಿಎಸ್ ಶಾಲೆ ಹಾಗೂ 164 ಪೌಢಶಾಲೆಗಳಿಗೆ ಅನುಮೋದನೆಗೆ ನೀಡಲಾಗಿದೆ ಎಂದು ಹೇಳಿದರು.







