ಅನಧಿಕೃತ ಕಟ್ಟಡ, ನಿವೇಶನಗಳಿಗೆ ಬಿ-ಖಾತಾ ನೀಡುವ ಅವಧಿ ಮೂರು ತಿಂಗಳು ವಿಸ್ತರಣೆ : ಬೈರತಿ ಸುರೇಶ್

ಸಚಿವ ಬೈರತಿ ಸುರೇಶ್
ಬೆಂಗಳೂರು : ರಾಜ್ಯದ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ‘ಬಿ’-ಖಾತಾ ನೀಡುವ ಅವಧಿಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಂದರೆ, ಯಾವುದೇ ಪರವಾನಗಿ, ಭೂಪರಿವರ್ತನೆ ಮಾಡಿಸಿಕೊಳ್ಳದೇ, ನಕ್ಷೆ ಮಂಜೂರಾತಿ ಮಾಡಿಕೊಳ್ಳದೇ ಕಂದಾಯ ನಿವೇಶನಗಳಲ್ಲಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದರೆ ಅಂತಹವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಿ-ಖಾತಾ ನೀಡಿ ಸಕ್ರಮಗೊಳಿಸುವ ನಿರ್ಧಾರ ಕೈಗೊಂಡಿತ್ತು ಎಂದರು.
ಇದರನ್ವಯ ನಾಗರಿಕರಿಗೆ ಒಂದು ಬಾರಿಯ ಅವಕಾಶವನ್ನು ನೀಡಲಾಗಿತ್ತು. ನಾಗರಿಕರು ನಿಗದಿತ ಶುಲ್ಕಗಳನ್ನು ಪಾವತಿ ಮಾಡಿ ತಮ್ಮ ಕಟ್ಟಡಗಳಿಗೆ ಬಿ-ಖಾತಾ ಪಡೆದುಕೊಳ್ಳಬಹುದಾಗಿದೆ. ಮೇ 10ರ ವೇಳೆಗೆ ಬಿ-ಖಾತಾ ಪಡೆದುಕೊಳ್ಳಲು ಸಮಯ ನೀಡಲಾಗಿತ್ತು ಎಂದು ಅವರು ಹೇಳಿದರು.
ರಾಜ್ಯದ ಮಹಾನಗರಪಾಲಿಕೆಗಳು ಮತ್ತು ನಗರ ಪ್ರದೇಶಗಳಲ್ಲಿ 30 ಲಕ್ಷಕ್ಕೂ ಅಧಿಕ ಇಂತಹ ಅನಧಿಕೃತ ಕಟ್ಟಡಗಳು/ಮನೆಗಳು/ನಿವೇಶನಗಳಿವೆ ಎಂದು ಅಂದಾಜಿಸಲಾಗಿದೆ. ಸರಕಾರ ಒಂದು ಬಾರಿಯ ಅವಕಾಶ ನೀಡಿದ ನಂತರ ನಾಗರಿಕರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿ ತಮ್ಮ ಆಸ್ತಿಗಳಿಗೆ ಬಿ-ಖಾತಾ ಪಡೆದುಕೊಳ್ಳುತ್ತಿದ್ದಾರೆ ಎಂದು ಸುರೇಶ್ ತಿಳಿಸಿದರು.
2 ಲಕ್ಷ ಬಿ-ಖಾತಾ ವಿತರಣೆ: ಸರಕಾರ ನೀಡಿದ ಅವಕಾಶವನ್ನು ಬಳಸಿಕೊಂಡಿರುವ ಸುಮಾರು 10 ಲಕ್ಷ ಆಸ್ತಿಗಳಿಗೆ ಬಿ-ಖಾತಾ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಈ ಪೈಕಿ 2 ಲಕ್ಷ ಆಸ್ತಿಗಳಿಗೆ ಬಿ-ಖಾತೆಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಹಂತಹಂತವಾಗಿ ಬಿ-ಖಾತಾ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇನ್ನೂ ಮೂರು ತಿಂಗಳು ವಿಸ್ತರಣೆ: ಸರಕಾರದ ಈ ನಾಗರಿಕ ಸ್ನೇಹಿ ಸೌಲಭ್ಯವನ್ನು ಇನ್ನೂ ಹೆಚ್ಚಿನ ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಮಹಾನಗರಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ವಿತರಣೆ ಪ್ರಕ್ರಿಯೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸುರೇಶ್ ತಿಳಿಸಿದರು.
ಜಿಪಿಎ, ಕರಾರುದಾರರಿಗೂ ಸೌಲಭ್ಯ: ನಿವೇಶನ ಅಥವಾ ಕಟ್ಟಡಗಳನ್ನು ಖರೀದಿಸಲು ಮುಂದಾಗಿ ಜಿಪಿಎ ಅಥವಾ ಅಗ್ರೀಮೆಂಟ್(ಕರಾರು) ಮಾಡಿಕೊಂಡಿರುವ ನಾಗರಿಕರಿಗೂ ‘ಬಿ’-ಖಾತಾ ವಿತರಣೆಗೆ ಗಂಭೀರ ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸದ್ಯದಲ್ಲೇ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರಿಂದ ಜಿಪಿಎ ಅಥವಾ ಕರಾರುದಾರರಿಗೂ ಅನುಕೂಲವಾಗಲಿದೆ’
-ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ