ಮೇಲ್ಮನೆಯಲ್ಲಿ ಮುಂದುವರಿದ ಬಿ.ನಾಗೇಂದ್ರ ರಾಜೀನಾಮೆ ಗದ್ದಲ

ಸಭಾಪತಿ ಸಲೀಂ ಅಹ್ಮದ್
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣ ಸಂಬಂಧ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪರಿಷತ್ನಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲ ಬುಧವಾರವೂ ಮುಂದುವರೆಯಿತು. ರಾಜೀನಾಮೆ ನೀಡುವವರೆಗೂ ಕಲಾಪಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ಕಪ್ಪುಬಟ್ಟೆ ಹಿಡಿದು ವಿಪಕ್ಷದ ಸದಸ್ಯರು ಪಟ್ಟು ಹಿಡಿದರು.
ಸಭಾಪತಿ ಸಲೀಂ ಅಹ್ಮದ್ ಅವರು ಗದ್ದಲ ನಡುವೆಯೂ ಸದನದ ಅಜೆಂಡಾ ಪ್ರಕಾರವಾಗಿ ಕಾರ್ಯಕಲಾಪವನ್ನು ಮುಂದುವರೆಸಿದರು. ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದ್ದು, ಈ ಬಗ್ಗೆ ಸಮಗ್ರ ಚರ್ಚೆಯಾಗಬೇಕಿದೆ. ಇದಕ್ಕೂ ಮುನ್ನ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಳಂಕಿತ ಮಂತ್ರಿಗಳನ್ನು ಇಟ್ಟುಕೊಂಡು ಹೇಗೆ ಸದನ ಮಾಡುತ್ತೀರಾ? ಮೊದಲು ರಾಜೀನಾಮೆ ಕೊಡಿಸಿ. ನಂತರ ಸುಗಮವಾಗಿ ಸದನ ನಡೆಸೋಣ ಎಂದು ಆಗ್ರಹಿಸಿದರು.
ಮಾಜಿ ಸಭಾಪತಿ, ಬಿಜೆಪಿ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಎರಡು ದಿನಗಳಿಂದ ಪ್ರಶ್ನೋತ್ತರ ಕಲಾಪ ಸರಿಯಾಗಿ ನಡೆದಿಲ್ಲ. ಮೊದಲು ಪ್ರಶ್ನೋತ್ತರ ಕಲಾಪ ನಡೆಸಿದ ಬಳಿಕ ಚರ್ಚೆ ಮಾಡಲಿ ಎಂದು ಸಭಾಪತಿಗಳ ನೆರವಿಗೆ ಬಂದರು.
ಈ ವೇಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದ ಜ್ವಲಂತ ಸಮಸ್ಯೆಗಳಿವೆ. ಈ ಬಗ್ಗೆ ಚರ್ಚೆಯಾಗಲಿ. ಬಿ.ನಾಗೇಂದ್ರ ರಾಜೀನಾಮೆ ಕೇಳುವ ಮುನ್ನ ನೋಟಿಸ್ ನೀಡಿದ ನಂತರ ಚರ್ಚೆಯಾಗಲಿ. ಬಳಿಕ ನಾಗೇಂದ್ರ ಅವರನ್ನು ಯಾಕೆ ಸಚಿವರನ್ನಾಗಿ ಮಾಡಿದೆವು ಎಂಬುದರ ಬಗ್ಗೆ ಸ್ಪಷ್ಟನೆ ನೀಡುತ್ತೇವೆ. 75 ವರ್ಷಗಳಲ್ಲಿ ರಾಜ್ಯದಲ್ಲಿ ಇಂತಹ ಬರಗಾಲ ಬಂದಿರಲಿಲ್ಲ. ಈ ಬಗ್ಗೆ ಕೇಂದ್ರಕ್ಕೆ ವರದಿ ನೀಡಬೇಕೆಂಬುದು ಸೇರಿದಂತೆ ಹಲವು ವಿಚಾರಗಳ ಚರ್ಚೆಯಾಗಬೇಕಿದೆ ಎಂದು ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಎಸ್..ರವಿ ಮಾತನಾಡಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಹೆಚ್ಚಾಗಿದೆ, ಅದರ ಬಗ್ಗೆ ಚರ್ಚೆ ಮಾಡಿ. ನಾಗೇಂದ್ರ ವಿಚಾರ ನೋಟಿಸ್ ಕೊಟ್ಟು ಚರ್ಚೆ ಮಾಡಿ ಎಂದರು.
ಈ ವೇಳೆ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಎದ್ದು ನಿಂತು, ವಿಪಕ್ಷಗಳು ಪ್ರಶ್ನೋತ್ತರ ಅವಧಿಗೆ ಅಡ್ಡಿಪಡಿಸಬಾರದು. ಇದಕ್ಕೆ ಸಭಾಪತಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಆಗ ಸದನದಲ್ಲಿ ಗದ್ದಲ ಗಲಾಟೆ ನಡೆಯಿತು.
ಬಳಿಕ, ಪಾಯಿಂಟ್ ಆಫ್ ಆರ್ಡರ್ ತೆಗೆದ ಬಸವರಾಜ್ ಹೊರಟ್ಟಿ, ಈ ಸದನವನ್ನು ಗಲಾಟೆಯಲ್ಲೇ ನಡೆಸುವುದು ಸರಿಯಲ್ಲ. ಯಾರು ಪ್ರಶ್ನೆ ಕೇಳುತ್ತಾರೆಂದು ಗೊತ್ತಾಗುತ್ತಿಲ್ಲ. ಇದಕ್ಕೆ ಇತಿಶ್ರೀ ಹಾಡಿ. ಈ ಪದ್ಧತಿ ನಾಚಿಕೆ ಬರುತ್ತದೆ. ಸದನ ಮುಂದೂಡಿ ಸದಸ್ಯರೊಂದಿಗೆ ಮಾತುಕತೆ ಮಾಡುವಂತೆ ಸಭಾಪತಿಗೆ ಮನವಿ ಮಾಡಿದರು.
ಈ ಮಧ್ಯೆ, ರಾಹುಲ್ ಗಾಂಧಿ ಹೆಸರನ್ನು ವಿಪಕ್ಷಗಳು ಪ್ರಸ್ತಾಪಿಸಿದವು. ಅದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಮತ್ತೆ ಗದ್ದಲ ಏರ್ಪಟ್ಟಿತು. ಕಪ್ಪು ಬಟ್ಟೆ ತಿರುಗಿಸಿ ‘ಕೋಟಿ ಕೋಟಿ ಲೂಟಿ ಲೂಟಿ’ ಎಂದು ವಿಪಕ್ಷಗಳು ಘೋಷಣೆ ಕೂಗಿದವು. ಇದು ಉಭಯ ಪಕ್ಷಗಳ ಸದಸ್ಯರ ಮಾತಿನ ಜಟಾಪಟಿಗೂ ಕಾರಣವಾಯಿತು. ಗದ್ದಲ ನಡುವೆಯೂ ಸಭಾಪತಿಗಳು ಪ್ರಶ್ನೋತರ ಕಲಾಪ ಹಾಗೂ ಶೂನ್ಯ ವೇಳೆಯನ್ನು ಪೂರ್ಣಗೊಳಿಸಿದರು.
‘ಸಂವಿಧಾನ ಪುಸ್ತಕ ಪ್ರದರ್ಶಿಸಿದ ಬಿ.ನಾಗೇಂದ್ರ’
ಮೇಲ್ಮನೆಯ ಶೂನ್ಯವೇಳೆಯಲ್ಲಿ ಸಚಿವ ಬಿ.ನಾಗೇಂದ್ರ ಸದನಕ್ಕೆ ಆಗಮಿಸಿದರು. ಈ ವೇಳೆ ವಿಪಕ್ಷ ಸದಸ್ಯರು ಏರುಧ್ವನಿಯಲ್ಲಿ ‘ನಾಗೇಂದ್ರ ಗೋಬ್ಯಾಕ್.. ನಾಗೇಂದ್ರ ಗೋಬ್ಯಾಕ್’ ಎಂದು ಘೋಷಣೆ ಕೂಗಿದರು. ಆಗ ಸಚಿವ ನಾಗೇಂದ್ರ ನಗೆ ಬೀರುತ್ತಾ ವಿಪಕ್ಷ ಸದಸ್ಯರೆಡೆಗೆ ಕೈ ಮುಗಿಯುತ್ತಾ ತಮ್ಮ ಆಸನದಲ್ಲಿ ಕುಳಿತರು. ಈ ವೇಳೆ, ಘೋಷಣೆ ನಿಲ್ಲಿಸಿದ ವಿಪಕ್ಷ ಸದಸ್ಯರು, ‘ನಾಗೇಂದ್ರ ರಾಜೀನಾಮೆ.., ನಾಗೇಂದ್ರ ರಾಜೀನಾಮೆ..’ ಎಂದು ಕೂಗಿದರು. ಆಗ, ಆಡಳಿತ ಪಕ್ಷದ ಮೊದಲ ಸಾಲಿನಲ್ಲೇ ಕುಳಿತಿದ್ದ ಸಚಿವ ಬಿ.ನಾಗೇಂದ್ರ ಅವರು ವಿಪಕ್ಷದವರತ್ತ ಸಂವಿಧಾನ ಪುಸ್ತಕವನ್ನು ಪ್ರದರ್ಶಿಸಿ ತಿರುಗೇಟು ನೀಡಿದರು.






