"ಇಲ್ಲಿ ಸುಮ್ಮನಿದ್ದರೆ ಬೆಲೆಯೇ ಇಲ್ಲ": ಬಿಜೆಪಿ ತೊರೆಯುವ ಮಾತಾಡಿದ ಶ್ರೀರಾಮುಲು!

PC : x/@BYVijayendra
ಬೆಂಗಳೂರು: ಮಂಗಳವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಕಾರ್ಯವೈಖರಿ ಬಗ್ಗೆ ಉಸ್ತುವಾರಿ ರಾಧಾ ಮೋಹನ್ ದಾಸ್ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಶ್ರೀರಾಮುಲು ಅವರು ಆಕ್ರೋಶಗೊಂಡು ಪಕ್ಷ ತೊರೆಯುವ ಮಾತುಗಳನ್ನಾಡಿದ್ದಾರೆ ಎಂದು ತಿಳಿದು ಬಂದಿದೆ.
ʼಸದಾನಂದ ಗೌಡ ಸಮಿತಿ ಉಪ ಚುನಾವಣೆ ಕುರಿತ ವರದಿಯನ್ನು ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎಂದು ಹೇಳುತ್ತೀರಿʼ ಎಂದು ಸಭೆಯಲ್ಲೇ ಶ್ರೀರಾಮುಲು ಅವರು ರಾಧಾ ಮೋಹನ್ ದಾಸ್ ಅವರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ವಿಜಯೇಂದ್ರ ವಿರುದ್ಧವೂ ಆಕ್ರೋಶ ಹೊರಹಾಕಿದ ಶ್ರೀರಾಮುಲು, "ನೀವು ರಾಜ್ಯಾಧ್ಯಕ್ಷರು. ಜವಾಬ್ದಾರಿ ಸ್ಥಾನದಲ್ಲಿ ಇದ್ದೀರಿ. ನಾನು ನಿಮ್ಮ ತಂದೆ ಯಡಿಯೂರಪ್ಪನವರ ಜೊತೆ ಕೆಲಸ ಮಾಡಿದ್ದೇನೆ. ನಿಮಗೆ ನಾವು ಬೇಡವಾದರೆ ಹೇಳಿ, ಪಕ್ಷ ಬಿಡಲು ನಾವು ಸಿದ್ಧರಿದ್ದೇವೆ. ನಾನು ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ, ಇಲ್ಲಿ ಸುಮ್ಮನಿದ್ದರೆ ಬೆಲೆಯೇ ಇಲ್ಲ . ಕೆಲಸ ಮಾಡಿದವರಿಗೆ ಬೆಲೆಯೇ ಇಲ್ಲʼ ಎಂದು ಶ್ರೀರಾಮುಲು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.
ಸಭೆ ಬಳಿಕ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹಾಗೂ ಇತರೆ ಹೈಕಮಾಂಡ್ ನಾಯಕರಿಗೆ ಕರೆ ಮಾಡಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.







