ಬಾಗಲಕೋಟೆ ಉಪಚುನಾವಣೆ : ʼವಾರ್ತಾಭಾರತಿʼ - 'ಸಂಕಲ್ಪ್' ಮತದಾನೋತ್ತರ ಸಮೀಕ್ಷೆ ಹೇಳುವುದೇನು?

ವಾರ್ತಾಭಾರತಿ ಹಾಗು ಬೆಂಗಳೂರಿನ ರಾಜಕೀಯ ಸಂಶೋಧನಾ ಸಂಸ್ಥೆ 'ಸಂಕಲ್ಪ್' ಜಂಟಿಯಾಗಿ ನಡೆಸಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತದಾನೋತ್ತರ ಸಮೀಕ್ಷೆಯಲ್ಲಿ ಕಂಡು ಬಂದಿರುವ ಪ್ರಮುಖ ಅಂಶಗಳು ಇಲ್ಲಿವೆ :
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಹಾಲಿ ಶಾಸಕರಿದ್ದ ಕಾಂಗ್ರೆಸ್ ಗೆ ಬಿಜೆಪಿ ತೀವ್ರ ಪೈಪೋಟಿ ನೀಡಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ 5,878 ಮತಗಳ ಸಣ್ಣ ಅಂತರದಿಂದ ಈ ಕ್ಷೇತ್ರವನ್ನು ಗೆದ್ದಿದ್ದ ಕಾಂಗ್ರೆಸ್ ಗೆ ಈಗ ಸೀಟು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಲಿದೆ. ಕಳೆದ ಬಾರಿ ಕಾಂಗ್ರೆಸ್ ಪಡೆದ ಮತಗಳಲ್ಲಿ 12% ದಷ್ಟು ಬಿಜೆಪಿಗೆ ಹೋಗಲಿದೆ ಎಂದು ಹೇಳುತ್ತಿದೆ ಸಮೀಕ್ಷೆ. ಇದು ಕಾಂಗ್ರೆಸ್ ಗೆ ಶುಭ ಸುದ್ದಿಯಲ್ಲ. ಕ್ಷೇತ್ರದಲ್ಲಿ ಲಿಂಗಾಯತರು ಮತ್ತೆ ಬಿಜೆಪಿಯತ್ತ ವಾಲಿರುವುದು ಕಾಣುತ್ತಿದೆ.
ಪುರುಷರಲ್ಲಿ 50.8% ಮತದಾರರು ಕಾಂಗ್ರೆಸ್ ಕಡೆ ಹೋದರೆ 48.1% ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಪುರುಷ ಮತದಾರರಲ್ಲಿ 1.1% ರಷ್ಟು ಮಂದಿ ಇತರರನ್ನು ಬೆಂಬಲಿಸಿದ್ದಾರೆ. ಅಚ್ಚರಿ ಅಂದ್ರ್ರೆ ಮಹಿಳೆಯರಲ್ಲಿ 52.0% ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದು, 37.7% ಮಹಿಳಾ ಮತದಾರರು ಮಾತ್ರ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಮಹಿಳೆಯರ 10.3% ಮತ ಇತರರಿಗೆ ಹೋಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಹೋಲಿಸಿದರೆ ಬಾಗಲಕೋಟೆಯಲ್ಲಿ ಸ್ತ್ರೀ ಶಕ್ತಿ ಬಿಜೆಪಿಗೆ ಒಲಿದಿದೆ. ಇದೇ ಬಿಜೆಪಿಗೆ ಬಾಗಲಕೋಟೆಯಲ್ಲಿ ಮುನ್ನಡೆ ನೀಡುವ ಪ್ರಮುಖ ಅಂಶವಾಗುವ ಸಾಧ್ಯತೆಯಾಗಿಯೂ ಕಾಣುತ್ತಿದೆ.
18 ರಿಂದ 25 ವರ್ಷದ ಮತದಾರರಲ್ಲಿ 52.7% ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ 35.5% ಮಂದಿ ಮಾತ್ರ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಇತರರಿಗೆ 11.8% ಈ ವರ್ಗದ ಮತಗಳು ಹೋಗಿವೆ. ಅಂದರೆ ಯುವ ಮತದಾರರು ಇಲ್ಲಿ ಬಿಜೆಪಿ ಕಡೆ ವಾಲಿದ್ದಾರೆ. 26 ರಿಂದ 40 ವರ್ಷದವರು ಒಟ್ಟು ಮತದಾರರಲ್ಲಿ ಅತಿದೊಡ್ಡ ಗುಂಪು. ಇವರಲ್ಲೂ ಬಿಜೆಪಿ ಮುನ್ನಡೆ ಪಡೆದಿದೆ. ಇವರಲ್ಲಿ 54.0% ಮಂದಿ ಬಿಜೆಪಿ ಜೊತೆ ಹೋಗಿದ್ದರೆ, 41.5% ರಷ್ಟು ಮಂದಿ ಕಾಂಗ್ರೆಸ್ ಗೆ ಮತ ಹಾಕಿದ್ದಾರೆ.
26 ರಿಂದ 40 ವರ್ಷದ ಮತದಾರರಲ್ಲಿ 4.5% ಮಂದಿ ಇತರರನ್ನು ಬೆಂಬಲಿಸಿದ್ದಾರೆ. 41 ರಿಂದ 60 ವರ್ಷದ ಮತದಾರರಲ್ಲಿ ಮಾತ್ರ ಕಾಂಗ್ರೆಸ್ ದೊಡ್ಡ ಮುನ್ನಡೆ ಗಳಿಸಿದೆ. ಇದರಲ್ಲಿ ದಿವಂಗತ ಎಚ್ ವೈ ಮೇಟಿ ಅವರ ಅಭಿಮಾನಿಗಳು ಹಾಗು ಅನುಕಂಪದ ಅಂಶ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿರಬಹುದು. ಇವರಲ್ಲಿ 57.4% ಮತಗಳನ್ನು ಕಾಂಗ್ರೆಸ್ ಪಡೆದಿದೆ, ಆ ವರ್ಗದಲ್ಲಿ ಬಿಜೆಪಿ ಗಳಿಸಿದ ಮತಗಳ ಪ್ರಮಾಣ 41.4%. 60 ವರ್ಷ ದಾಟಿದ ಮತದಾರರಲ್ಲಿ 52.7% ಮತಗಳು ಕಾಂಗ್ರೆಸ್ ಗೆ ಹೋಗಿದ್ದರೆ, 47.3% ಮತಗಳು ಬಿಜೆಪಿಗೆ ಹೋಗಿವೆ.
2023 ರಲ್ಲಿ ಗಳಿಸಿದ ಮತಗಳ ಪೈಕಿ ಕಾಂಗ್ರೆಸ್ 87% ಮತಗಳನ್ನು ಉಳಿಸಿಕೊಂಡಿದೆ. ಅದರ 12% ಮತಗಳು ಬಿಜೆಪಿ ಕಡೆ ಹೋಗಿವೆ. 1% ಇತರರಿಗೆ ಹೋಗಿವೆ. ಆದರೆ ಬಿಜೆಪಿ 2023 ರ ಮತಗಳಲ್ಲಿ 92% ವನ್ನು ಉಳಿಸಿಕೊಂಡಿದೆ. ಅದರ 7% ಮತಗಳು ಮಾತ್ರ ಕಾಂಗ್ರೆಸ್ ಗೆ ಹೋಗಿದೆ. ಅಂದರೆ ದಾವಣಗೆರೆ, ಬಾಗಲಕೋಟೆ ಎರಡೂ ಕಡೆ ಬಿಜೆಪಿ 2023 ರ ಮತ ಪ್ರಮಾಣವನ್ನು ಬಹುತೇಕ ಹಾಗೆ ಉಳಿಸಿಕೊಂಡಿದೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿರುವ 12% ಮತಗಳಲ್ಲಿ 33% ಲಿಂಗಾಯತ, 19% ದಲಿತರು/ಎಸ್ಸಿ, 11% ಬ್ರಾಹ್ಮಣ, 7% ಕುರುಬ ಹಾಗು 30% ಇತರರು. ಬಿಜೆಪಿಯಿಂದ ಕಾಂಗ್ರೆಸ್ ಗೆ ಹೋಗಿರುವ 7% ಮತಗಳಲ್ಲಿ 32% ದಲಿತರು/ಎಸ್ಸಿ, 26% ಲಿಂಗಾಯತ, 7% ಕುರುಬ, 7% ಬ್ರಾಹ್ಮಣ ಹಾಗು 29% ಇತರರು.
► ಕಾಂಗ್ರೆಸ್ ಗೆ ಇವುಗಳಿಂದ ಲಾಭ
- ಮೇಟಿ ನಿಧನದ ಅನುಕಂಪ,
- ಆಡಳಿತ ಪಕ್ಷದ ಕಡೆ ಒಲವು
- ಬಿಜೆಪಿ ಅಭ್ಯರ್ಥಿ ಕುರಿತ ನಿರುತ್ಸಾಹ
► ಬಿಜೆಪಿಗೆ ಇವುಗಳಿಂದ ಲಾಭ
- ಕಾಂಗ್ರೆಸ್ ಸರಕಾರದ ಕುರಿತ ಆಡಳಿತ ವಿರೋಧಿ ಭಾವನೆ
- ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು
- ಯುವಜನತೆ, ಲಿಂಗಾಯತರ ಒಲವು
ಕಾಂಗ್ರೆಸ್ ನ ಉಮೇಶ್ ಮೇಟಿ 43% ರಿಂದ 48% ಹಾಗು ಬಿಜೆಪಿಯ ವೀರಣ್ಣ ಚರಂತಿಮಠ 40% ರಿಂದ 46% ಮತ ಗಳಿಸುವ ಸಾಧ್ಯತೆ ಕಾಣುತ್ತಿದೆ. ಇಲ್ಲಿ ಕಾಂಗ್ರೆಸ್ ಗೆ ಇರುವುದು 2,000 ದಿಂದ 3,500 ಒಳಗಿನ ತೀರಾ ಸಣ್ಣ ಅಂತರದ ಮುನ್ನಡೆ. ಹಾಗಾಗಿ ಇಲ್ಲಿ ಬಿಜೆಪಿ ಈ ಬಾರಿ ನೀಡಿರುವ ಭಾರೀ ಪೈಪೋಟಿ ಫಲಿತಾಂಶದ ದಿನ ಕಾಂಗ್ರೆಸ್ ಗೆ ಆಘಾತ ನೀಡಿದರೆ ಅಚ್ಚರಿಯಿಲ್ಲ.






