2028ರ ವಿಧಾನಸಭೆ ಚುನಾವಣೆಯಲ್ಲೂ ಸಿದ್ದರಾಮಯ್ಯ ಸ್ಪರ್ಧೆ : ಬೈರತಿ ಸುರೇಶ್

ಬೆಂಗಳೂರು : ಕಾಂಗ್ರೆಸ್ ಪಕ್ಷಕ್ಕೆ ಒಳಿತಾಗಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ 2028ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧೆ ಮಾಡುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ಮಂಗಳವಾರ ಕೆ.ಆರ್.ಪುರದ ಖಾಸಗಿ ಹೊಟೇಲ್‍ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಚುನಾವಣಾ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕಟ್ಟಾಳುಗಳು ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಭಿವೃದ್ಧಿಪರ ಆಡಳಿತ ನೀಡುತ್ತಿದೆ. ರಾಜಕೀಯವಾಗಿ ಹೊರಗಡೆ ಅನೇಕ ವಿಚಾರಗಳು ಚರ್ಚೆಯಾಗುತ್ತಿವೆ. ಅದರ ಬಗ್ಗೆ ನಾವು ಚಿಂತೆ ಮಾಡೋದು ಬೇಡ. ಯಾರು ಮುಖ್ಯಮಂತ್ರಿ ಆಗಬೇಕು, ಯಾರು ಪಕ್ಷದ ಅಧ್ಯಕ್ಷರಾಗಬೇಕು ಅನ್ನೋದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅವರು ತಿಳಿಸಿದರು.
ಮುಂಬರುವ ದಿನಗಳಲ್ಲಿ ಏನಾಗುತ್ತದೆ ಎಂದು ಯಾರಿಗೆ ಗೊತ್ತು. ಹೈಕಮಾಂಡ್ ಯಾರಿಗೆ, ಎಲ್ಲಿಯವರೆಗೆ ಯಾವ ಸ್ಥಾನದಲ್ಲಿ ಇರಿಸಬೇಕು ಅನ್ನೋ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ. ಅದು ಹೈಕಮಾಂಡ್‍ಗೆ ಬಿಟ್ಟ ವಿಚಾರ. ನಾವು ನಮ್ಮ ಸ್ಥಳೀಯ ರಾಜಕಾರಣದ ಕಡೆ ಲಕ್ಷ್ಯ ಇರಿಸೋಣ. ನಾನು ಈಗ ನಿಮ್ಮ ಮುಂದೆ ಸಚಿವನಾಗಿ ನಿಂತಿದ್ದೇನೆ. ಮುಂದೆ ಹೈಕಮಾಂಡ್ ಬಯಸಿದರೆ ಮುಂದುವರೆಯುತ್ತೇನೆ ಎಂದು ಸುರೇಶ್ ಹೇಳಿದರು.







