ಏಳನೇ ದಿನಕ್ಕೆ ಕಾಲಿಟ್ಟ ‘ಬಳ್ಳಾರಿ ಚಲೋ’ ಪಾದಯಾತ್ರೆ

ಬಳ್ಳಾರಿ: ‘ಬಳ್ಳಾರಿ ಚಲೋ’ ಪಾದಯಾತ್ರೆ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯ ಕಂಪ್ಲಿಯಲ್ಲಿನ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭಗೊಂಡು, ಸುಮಾರು 20ಕಿ.ಮೀ. ಕ್ರಮಿಸಿ ಸಂಡೂರಿನ ಹಳೇದಾರೋಜಿಯಲ್ಲಿ ಸಮಾಪ್ತಿಯಾಯಿತು.
ಪಾದಯಾತ್ರೆ ಉದ್ದಕ್ಕೂ ಪ್ರತಿಯೊಂದು ಗ್ರಾಮದಲ್ಲೂ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಅದ್ದೂರಿ ಸ್ವಾಗತ ನೀಡಿದರು. ಬಿಸಿಲಿನ ನಡುವೆಯೂ ಜನರ ಉತ್ಸಾಹ ಕುಗ್ಗಲಿಲ್ಲ. ಪಾದಯಾತ್ರೆ ಸಾಗಿದಂತೆಲ್ಲಾ ಜನರು ಸ್ವಯಂ ಪ್ರೇರಿತರಾಗಿ ಹೆಜ್ಜೆ ಹಾಕಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ‘ಬಳ್ಳಾರಿ ಚಲೋ’ ಕೇವಲ ಬಿಜೆಪಿ ನಡೆಸುತ್ತಿರುವ ರಾಜಕೀಯ ಪಾದಯಾತ್ರೆಯಲ್ಲ, ರಾಜ್ಯದ ಜನರ ಸಮಸ್ಯೆಗಳಿಗೆ ಧ್ವನಿಯಾಗಲು ನಡೆಯುತ್ತಿರುವ ಜನಾಂದೋಲನ ಎಂದು ಹೇಳಿದರು.
ಏಳು ದಿನಗಳಿಂದ ವಿಜಯೇಂದ್ರ ಬಿಸಿಲು-ಮಳೆ ಎನ್ನದೆ ಕಾರ್ಯಕರ್ತರು ಮತ್ತು ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಅವರ ಪ್ರತಿಯೊಂದು ಹೆಜ್ಜೆಯೂ ಜನರ ಸಮಸ್ಯೆಗಳ ಪರ ಹೋರಾಟದ ಸಂಕೇತ. ದಿನದಿಂದ ದಿನಕ್ಕೆ ಪಾದಯಾತ್ರೆಗೆ ಹೆಚ್ಚುತ್ತಿರುವ ಜನಬೆಂಬಲವೇ ಸರಕಾರದ ವಿರುದ್ಧ ಜನರಲ್ಲಿ ಮೂಡಿರುವ ಅಸಮಾಧಾನಕ್ಕೆ ಸಾಕ್ಷಿ ಎಂದು ರಾಘವೇಂದ್ರ ಹೇಳಿದರು.
ವಿಜಯೇಂದ್ರ ಹೋರಾಟ ಅಧಿಕಾರಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ. ರಾಜ್ಯದ ಜನರ ಹಿತಕ್ಕಾಗಿ, ರೈತರ ಬದುಕಿಗಾಗಿ, ಯುವಕರ ಭವಿಷ್ಯಕ್ಕಾಗಿ ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ನಡೆಯುತ್ತಿರುವ ಹೋರಾಟ. ಈ ಹೋರಾಟಕ್ಕೆ ಜನರ ಆಶೀರ್ವಾದ ಮತ್ತು ಬೆಂಬಲ ಮತ್ತಷ್ಟು ಶಕ್ತಿ ನೀಡುತ್ತಿದೆ ಎಂದು ರಾಘವೇಂದ್ರ ಹೇಳಿದರು.
ಯುವಶಕ್ತಿಯೇ ಭಾರತದ ಭವಿಷ್ಯ: ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಯುವಜನತೆ, ಯುವಕರಿಗೆ ಗುಣಮಟ್ಟದ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗದ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರನ್ನು ಉದ್ಯೋಗ ಹುಡುಕುವವರಷ್ಟೇ ಅಲ್ಲದೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳನ್ನಾಗಿ ರೂಪಿಸಬೇಕು ಎಂದರು.
ಕೆಪಿಎಸ್‍ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಸೂಚನೆಯಿಂದ ಪರೀಕ್ಷೆ, ಫಲಿತಾಂಶ ಹಾಗೂ ಸಂದರ್ಶನದವರೆಗೆ ಆಗುತ್ತಿರುವ ವರ್ಷಗಳ ವಿಳಂಬಕ್ಕೆ ಯುವಕರು ತೊಂದರೆ ಅನುಭವಿಸುತ್ತಿದ್ದಾರೆ. ಕೆಪಿಎಸ್‍ಸಿಗೆ ಹೊಸ ಕಾಯಕಲ್ಪ ನೀಡುವ ಅಗತ್ಯವಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸರಕಾರಿ ನೇಮಕಾತಿ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಲಾಗುವುದು ಎಂದು ವಿಜಯೇಂದ್ರ ಭರವಸೆ ನೀಡಿದರು.






