ಬಳ್ಳಾರಿ ಗುಂಪು ಘರ್ಷಣೆ| ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬಂಧಿಸುವಂತೆ ಡಿಜಿಪಿಗೆ ಬಿಜೆಪಿ ನಿಯೋಗ ದೂರು

Photo| @BJP4Karnataka
ಬೆಂಗಳೂರು, ಜ.2: ಬಳ್ಳಾರಿ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ನರ ಭರತ್ ರೆಡ್ಡಿ ಅನ್ನು ಕೂಡಲೇ ಬಂಧಿಸಿ ಎಂದು ಬಿಜೆಪಿ ನಾಯಕರ ನಿಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ದೂರು ಸಲ್ಲಿಸಿ ಒತ್ತಾಯಿಸಿದೆ.
ಶುಕ್ರವಾರ ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಿ ದೂರು ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಗೊತ್ತಿಲ್ಲದೇ ಗುಂಡು ಹಾರಿದೆ, ಗೊತ್ತಿಲ್ಲದೇ ಸತ್ತಿದ್ದಾರೆ ಎಂದು ನಾಳೆ ಹೇಳಬಹುದು. ಇವರು ನಾಳೆ ಏನು ಹೇಳಬಹುದೆಂದು ಇವತ್ತೇ ಹೇಳಿದ್ದೇನೆ. ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದರು. ಅವರು ಶಾಸಕ ಜನಾರ್ದನ ರೆಡ್ಡಿ ಮನೆ ಗೋಡೆಗೆ ಹೋಗಿ ಹೇಗೆ ಬ್ಯಾನರ್ ಕಟ್ಟಿದರು? ಈ ಬಗ್ಗೆ ನಾವು ಪೊಲೀಸ್ ದೂರು ಕೊಟ್ಟಿದ್ದೇವೆ. ಆದರೂ ಎಫ್ಐಆರ್ ಆಗಿಲ್ಲ. ಅವರು ಕೊಟ್ಟ ದೂರಿಗೆ ಸಂಬಂಧಿಸಿ ತಕ್ಷಣ ಎಫ್ಐಆರ್ ಮಾಡಿದ್ದಾರೆ ಎಂದು ಟೀಕಿಸಿದರು.
ಈ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇದು ಗೂಂಡಾ ರಾಜ್ಯದ ಸಂದೇಶವಾಗಿದೆ. ಈ ಬಗ್ಗೆ ಶಾಸಕ ಮತ್ತು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಬೇಕಿತ್ತು ಎಂದು ಹೇಳಿದರು.





