ಬಂಡೀಪುರ-ನಾಗರಹೊಳೆ ಸಫಾರಿ ಹಂತಹಂತವಾಗಿ ಪುನಾರಂಭ : ಈಶ್ವರ್ ಖಂಡ್ರೆ

ಬೆಂಗಳೂರು : ಮಾನವ-ವನ್ಯಜೀವಿ ಸಂಘರ್ಷ ಅದರಲ್ಲೂ ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಳೆದ ನ.7ರಿಂದ ಸ್ಥಗಿತಗೊಳಿಸಲಾಗಿದ್ದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಯನ್ನು ತಾಂತ್ರಿಕ ಸಮಿತಿಯ ವರದಿ ಆಧರಿಸಿ ಹಂತ ಹಂತವಾಗಿ ಪುನಾರಂಭಿಸಲು ನಿರ್ಧರಿಸಿರುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಉನ್ನತಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮದ ಧಾರಣಾ ಸಾಮಥ್ರ್ಯವನ್ನು ವೈಜ್ಞಾನಿಕವಾಗಿ ನಿಗದಿ ಪಡಿಸಲು ರಚಿಸಲಾಗಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಾಂತ್ರಿಕ ಸಮಿತಿ ನೀಡಿರುವ ಪ್ರಾಥಮಿಕ ವರದಿಯ ಪರಾಮರ್ಶೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಹೆಗ್ಗಡ ದೇವನಕೋಟೆಯಲ್ಲಿ ರೈತರೂ ಸೇರಿದಂತೆ ಸಾವಿರಾರು ಸ್ಥಳೀಯರು, ರೆಸಾರ್ಟ್ ಸಿಬ್ಬಂದಿ ಪ್ರತಿಭಟನೆ ನಡೆಸಿ ಸಫಾರಿ ನಿಲ್ಲಿಸಿರುವುದರಿಂದ ತಮ್ಮ ಜೀವನೋಪಾಯಕ್ಕೆ ಅಡ್ಡಿಯಾಗಿದ್ದು, ಸಫಾರಿ ಪುನಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಮಾಧ್ಯಮಗಳಲ್ಲಿಯೂ ವರದಿಗಳು ಪ್ರಕಟವಾಗುತ್ತಿರುವುದರಿಂದ ಜೀವವೂ ಉಳಿಯಬೇಕು, ಜೀವನೋಪಾಯವೂ ಇರಬೇಕು ಎಂಬ ಕಾರಣಕ್ಕಾಗಿ ಸಫಾರಿಯನ್ನು ನಿಯಂತ್ರಿತವಾಗಿ ಮತ್ತು ಹಂತಹಂತವಾಗಿ ಪುನಾರಂಭ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಬಂಡೀಪುರದಲ್ಲಿ ನವೆಂಬರ್ ವರೆಗೆ ನಡೆಯುತ್ತಿದ್ದ ಟ್ರಿಪ್, ಸಮಯ ಮತ್ತು ವಾಹನ ಸಂಖ್ಯೆಯಲ್ಲಿ ಕಡಿತ ಮಾಡಿ ಸಫಾರಿ ಪುನಾರಂಭಕ್ಕೆ ಸಮ್ಮತಿಸಲಾಗಿದೆ. ಈ ಹಿಂದೆ ಬಂಡೀಪುರದಲ್ಲಿ 8 ಗಂಟೆಗಳ ಕಾಲ ಸಫಾರಿ ನಡೆಯುತ್ತಿತ್ತು. ಈಗ ಅದನ್ನು 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿಸಲಾಗಿದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.
ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ನಿರ್ಧಾರ: ಕಳೆದ ಜ.2ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಕರ್ನಾಟಕ ವನ್ಯಜೀವಿ ಮಂಡಳಿಯ 20ನೇ ಸಭೆಯಲ್ಲಿ ತಾಂತ್ರಿಕ ಸಮಿತಿ ರಚಿಸಿ, ಅಧ್ಯಯನ ವರದಿಯ ಆಧಾರದಲ್ಲಿ ಹಂತಹಂತವಾಗಿ ಸಫಾರಿ ಆರಂಭಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದರು.
ಅದರಂತೆ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು, ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್ ವಿಜ್ಞಾನಿ, ಭೋಪಾಲ್‍ನ ಭಾರತೀಯ ಅರಣ್ಯ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕರನ್ನು ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ಮಧ್ಯಂತರ ವರದಿಯ ಬಗ್ಗೆ ಇಂದು ಕೂಲಂಕಷವಾಗಿ ಚರ್ಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಸಫಾರಿ ಆದಾಯದ ಮೂರನೇ ಒಂದು ಭಾಗ ಸ್ಥಳೀಯ ಅಭಿವೃದ್ಧಿಗೆ: ಪರಿಸರ ಪ್ರವಾಸೋದ್ಯಮ ಅಂದರೆ ಸಫಾರಿಯಿಂದ ಬರುವ ಒಟ್ಟು ಆದಾಯದ ಮೂರನೇ ಒಂದು ಭಾಗದಷ್ಟು ಹಣವನ್ನು ಅರಣ್ಯದಂಚಿನ ಗ್ರಾಮಗಳ ಸ್ಥಳೀಯ ಸಮುದಾಯದವರಿಗೆ ಕೌಶಲ್ಯ ಅಭಿವೃದ್ಧಿಗಾಗಿ, ಜಾನುವಾರುಗಳಿಗೆ ಮೇವು ಬೆಳೆಸಲು ಮತ್ತು ಪರಿಸರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಷರತ್ತಿನೊಂದಿಗೆ ಆರಂಭಿಸಲು ಮತ್ತು ವನ್ಯಜೀವಿ-ಮಾನವ ಸಂಘರ್ಷ ತಡೆಯಲು ಸೂಕ್ತ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸುವ ಷರತ್ತಿನೊಂದಿಗೆ ಆರಂಭಿಸಲು ಸಮ್ಮತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದರ ಜೊತೆಗೆ ಸಫಾರಿ ವಾಹನಗಳನ್ನು ಕತ್ತಲಾದ ಬಳಿಕ ಓಡಿಸುವುದು, ಹೆಚ್ಚುವರಿ ಅವಧಿಗೆ ಓಡಿಸುವುದು ಮೊದಲಾದ ದುರ್ಬಳಕೆ ತಡೆಗಟ್ಟಲು ಕಡ್ಡಾಯವಾಗಿ ಮುಂದಿನ 2 ತಿಂಗಳೊಳಗಾಗಿ ಎಲ್ಲ ಸಫಾರಿ ವಾಹನಗಳಿಗೆ ಎಂಜಿನ್ ಸಂಪರ್ಕಿತ ಜಿಪಿಎಸ್ ಮತ್ತು ಡ್ಯಾಷ್ ಕ್ಯಾಮ್ ಅಳವಡಿಸಬೇಕು ಎಂದೂ ಸೂಚಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಹಿಂದಿನ ಮುಖ್ಯ ವನ್ಯಜೀವಿ ಪರಿಪಾಲಕರು ಕಳೆದ ಡಿ.28ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ, ಸರಗೂರು ಗಡಿ ಪ್ರದೇಶಗಳಲ್ಲಿ ಸ್ಥಾಪಿಸಿರುವ ಮಾನವ-ವನ್ಯಜೀವಿ ನಿರ್ವಹಣಾ ಶಿಬಿರಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದು, ಸಫಾರಿ ಸ್ಥಗಿತಗೊಳಿಸಿದ ಬಳಿಕ ಹೆಚ್ಚುವರಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಳೆದ 2 ತಿಂಗಳಲ್ಲಿ ಯಾವುದೇ ಪ್ರಮುಖ ಅಹಿತಕರ ಘಟನೆಗಳು ನಡೆಯದಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಸಫಾರಿ ಪುನಾರಂಭಿಸಬಹುದು ಎಂದು ಶಿಫಾರಸ್ಸು ಮಾಡಿದ್ದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036ಚದರ ಕಿಲೋ ಮೀಟರ್ ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ ಆಗಿದೆ ಎಂದು ಅವರು ತಿಳಿಸಿದರು.
ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿಲೋ ಮೀಟರ್ ಆಗಿದ್ದು, ಪರಿಸರ ಪ್ರವಾಸೋದ್ಯಮ ವಲಯ ಕೇವಲ 63 ಚದರ ಕಿಲೋ ಮೀಟರ್ ಅಂದರೆ ಶೇ.7.5 ಮಾತ್ರ. ಹೀಗಾಗಿ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.
ಸಿಬ್ಬಂದಿ ಕೊರತೆ ಬಗ್ಗೆ ಚರ್ಚೆ, ಶೇ.50ರಷ್ಟು ಸಫಾರಿ ವಾಹನ ಬಳಕೆ: ಬಂಡೀಪುರ, ಬಿ.ಆರ್.ಟಿ., ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ಮತ್ತು ವಾಹನಗಳ ಅಗತ್ಯದ ಬಗ್ಗೆ ಚರ್ಚಿಸಲಾಗಿದ್ದು, ನ.7ಕ್ಕೆ ಮುನ್ನ ಸಫಾರಿಯಲ್ಲಿ ಬಳಕೆ ಆಗುತ್ತಿದ್ದ ವಾಹನಗಳ ಪೈಕಿ ಪ್ರಥಮ ಹಂತದಲ್ಲಿ ಶೇ.50ರಷ್ಟು ವಾಹನಗಳನ್ನು ಮಾತ್ರವೇ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಉಳಿದ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಅರಣ್ಯದಂಚಿನ ಗ್ರಾಮಗಳ ಬಳಿ ಗಸ್ತು ಹೆಚ್ಚಿಸಲು ಬಳಸುವ ಮೂಲಕ ವನ್ಯ ಮೃಗಗಳು ನಾಡಿಗೆ ಬಾರದಂತೆ ತಡೆಯಲು ಸೂಚಿಸಲಾಗಿದೆ. ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇವಲ ಶೇ.50ರಷ್ಟು ವಾಹನ ಬಳಕೆ ಮಾಡಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಎನ್.ಟಿ.ಸಿ.ಎ.ಗೆ ತಿಳಿಸಿಯೇ ಹುಲಿ ಸೆರೆ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ- ಎನ್.ಟಿ.ಸಿ.ಎ ರಾಜ್ಯದಲ್ಲಿ ಹುಲಿಗಳನ್ನು ಹಿಡಿಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ನಮ್ಮ ಇಲಾಖೆ ಪ್ರತಿಯೊಂದು ಹುಲಿಯನ್ನು ಹಿಡಿಯುವಾಗಲೂ ಎನ್.ಟಿ.ಸಿ.ಎ. ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಅನುಸರಿಸಿ, ಸಮಿತಿ ರಚಿಸಿ, ಸಮಿತಿ ಶಿಫಾರಸಿನಂತೆ ಹುಲಿ ಸೆರೆ ಕಾರ್ಯಾಚರಣೆ ನಡೆಸಿದೆ. ಈ ಸಮಿತಿಯಲ್ಲಿ ಎನ್.ಟಿ.ಸಿ.ಎ. ಪ್ರತಿನಿಧಿಯೂ ಇರುತ್ತಾರೆ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಎಪಿಸಿಸಿಎಫ್ ಬಿಸ್ವಜಿತ್ ಮಿಶ್ರಾ ಮತ್ತಿತರರು ಪಾಲ್ಗೊಂಡಿದ್ದರು.






