ಬೆಂಗಳೂರು: 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆ

ಬೆಂಗಳೂರು, ಜು.25: ರಾಜಧಾನಿ ಬೆಂಗಳೂರಿನಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ ಜೆರಾಕ್ಸ್ ನೋಟು ತುಂಬಿರುವ 2 ಬಾಕ್ಸ್ ಗಳು ಪತ್ತೆಯಾಗಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ)ನಿಂದ 2 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಈ ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ನೋಟುಗಳನ್ನು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ.
ಕನಕಪುರ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಎರಡು ಬಾಕ್ಸ್ ಜೆರಾಕ್ಸ್ ನೋಟುಗಳನ್ನು ಸಾರ್ವಜನಿಕರು ನೋಡಿ ಸಂಚಾರ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸಂಚಾರ ಪೊಲೀಸರು ಕೂಡಲೇ ತಲಘಟ್ಟಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆರಾಕ್ಸ್ ನೋಟುಗಳನ್ನ ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ. ಜೆರಾಕ್ಸ್ ನೋಟುಗಳು ಅಲ್ಲಿಗೆ ಹೇಗೆ ಬಂದವು? ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
2 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ಆರ್‍ಬಿಐ ನಿಲ್ಲಿಸಿದೆ. ಬ್ಯಾಂಕ್‍ಗಳಿಂದ ಯಾವುದೇ ಗ್ರಾಹಕರಿಗೆ ಈ ನೋಟುಗಳನ್ನು ನೀಡುವುದಿಲ್ಲ. ಯಾವುದೇ ಬ್ಯಾಂಕ್‍ಗಳ ಎಟಿಎಂನಲ್ಲಿಯೂ 2000 ರೂ. ಮುಖಬೆಲೆಯ ನೋಟುಗಳನ್ನು ಹಾಕುತ್ತಿಲ್ಲ. ಆದರೆ, ಗ್ರಾಹಕರಿಂದ ಈ ನೋಟುಗಳನ್ನು ಬ್ಯಾಂಕ್‍ಗಳಲ್ಲಿ ಪಡೆಯಲಾಗುತ್ತದೆ. ಗ್ರಾಹಕರು ಈ ನೋಟುಗಳನ್ನು ತಂದು ಸೂಕ್ತ ದಾಖಲೆಯೊಂದಿಗೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬಹುದು ಎಂದು ಆರ್‍ಬಿಐ ತಿಳಿಸಿದೆ.





