ಬೆಂಗಳೂರು | ಶಾಲೆಯಲ್ಲಿ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಪ್ರಾಂಶುಪಾಲನ ಬಂಧನ
ಬಂಧಿತ ಪ್ರಾಂಶುಪಾಲ
ಬೆಂಗಳೂರು, ಆ.4: ಬೆಂಗಳೂರು: 10 ವರ್ಷ ವಯಸ್ಸಿನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ನಗರದ ಶಾಲೆಯೊಂದರ ಪ್ರಾಂಶುಪಾಲರನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಚಮಾರನಹಳ್ಳಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಲ್ಯಾಂಬರ್ಟ್ ಪುಷ್ಪರಾಜ್ (65) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: 10 ವರ್ಷ ವಯಸ್ಸಿನ ಎರಡನೆ ತರಗತಿ ವಿದ್ಯಾರ್ಥಿನಿಯ ತರಗತಿಗೆ ನಿನ್ನೆ ನುಗ್ಗಿದ ಆರೋಪಿಯೂ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಪೋಷಕರು ನೀಡಿರುವ ದೂರು ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೂ, ಅತ್ಯಾಚಾರದ ಬಳಿಕ ಆರೋಪಿ, ಬಾಲಕಿಗೆ ಕೇಕ್ ಕೊಟ್ಟು ಮನೆಗೆ ಕಳುಹಿಸಿದ್ದ. ಮನೆಗೆ ಹೋಗಿದ್ದ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಜೊತೆಗೆ, ಒಳ ಉಡುಪಿನಲ್ಲಿ ರಕ್ತಸ್ರಾವವಾಗಿತ್ತು. ಅದನ್ನು ಗಮನಿಸಿದ್ದ ತಾಯಿ, ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಅತ್ಯಾಚಾರವಾಗಿರುವುದಾಗಿ ತಿಳಿಸಿದ್ದರು. ನಂತರವೇ ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ. ಬಾಲಕಿ ಸಹ ಅತ್ಯಾಚಾರದ ಬಗ್ಗೆ ಹೇಳಿಕೆ ನೀಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.
ಸದ್ಯ ಖಾಸಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಾಂಶುಪಾಲನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಬಂದೋಬಸ್ತ್: ಘಟನೆ ಬಳಿಕ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದು, ಶಾಲೆಗೆ ರಜೆಯೂ ಘೋಷಣೆ ಮಾಡಲಾಗಿದೆ. ಇನ್ನೂ, ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.