ಬೆಂಗಳೂರು: ಬೇಬಿ ಸಿಟ್ಟಿಂಗ್ ಗೆ ಬಾಂಬ್ ಬೆದರಿಕೆ ಸಂದೇಶ; ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ

Photo: twitter
ಬೆಂಗಳೂರು: ನಗರದ ಹಲವೆಡೆಗಳಲ್ಲಾಗಿ 15 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮ್ಮ ನಿವಾಸಕ್ಕೆ ಸಮೀಪದ ಬೇಬಿ ಸಿಟ್ಟಿಂಗ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಹುಸಿ ಬೆದರಿಕೆ ಹಾಕಿದವರನ್ನು 24 ಗಂಟೆಯೊಳಗೆ ಪತ್ತೆ ಹಚ್ಚಲಾಗುವುದು. ಪೊಲೀಸರು ಈ ಬಗ್ಗೆ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೂ ಹೀಗೆ ಆಗಿತ್ತು. ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಬಂದಿರುವ ಸುದ್ದಿ ತಿಳಿದ ಕೂಡಲೇ ಗಾಬರಿಯಾಯಿತು. ನನಗೆ ಪರಿಚಯವಿರುವ ಕೆಲವು ಶಾಲೆಗಳಿಗೆ ಹೀಗೆ ಇಮೇಲ್ ಸಂದೇಶದ ಮೂಲಕ ಬೆದರಿಕೆ ಬಂದಿದೆ. ಪೋಲಿಸ್ ಆಯುಕ್ತರು ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಇದು ಹುಸಿ ಬಾಂಬ್ ಬೆದರಿಕೆ ಎಂದು ಮಾಹಿತಿ ನೀಡಿದ್ದಾರೆ. ಪೋಷಕರು ಆತಂಕದಲ್ಲಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಧೈರ್ಯದಿಂದ ಇರಬೇಕು” ಎಂದರು.
“ಈಗಾಗಲೇ ಬಾಂಬ್ ನಿಷ್ಕ್ರಿಯದಳ ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸ್ ಭಧ್ರತೆ ಇರುವ ಕಾರಣ ನಮ್ಮ ಮನೆ ಹತ್ತಿರ ಹೀಗೆ ಆಗುವ ಸಾಧ್ಯತೆ ಕಡಿಮೆ. ಆದರೂ ಇದು ಪ್ರಮುಖ ಪ್ರದೇಶವಾದರಿಂದ ಸ್ವಲ್ಪ ಎಚ್ಚರದಿಂದ ಇರಬೇಕು. ಬೆಂಗಳೂರು ಜನತೆಗೆ ಯಾವ ಆತಂಕ ಬೇಡ ಕೆಲವು ದುಷ್ಕರ್ಮಿಗಳಿಂದ ಈ ಬೆದರಿಕೆ ಕರೆ ಬಂದಿದ್ದು, 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ” ಎಂದರು.
“ಸೈಬರ್ ಕ್ರೈಂ ವಿಭಾಗದವರು ಸಕ್ರಿಯವಾಗಿದ್ದಾರೆ. ತಕ್ಷಣ ಕ್ರಮಕೈಗೊಂಡು ಸಂಬಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದ್ದಾರೆ. ನನಗೂ ಫೋನಿನ ಮೂಲಕ ಮಾಹಿತಿ ನೀಡುತ್ತಿದ್ದಾರೆ " ಎಂದು ತಿಳಿಸಿದರು.
“ಇದು ದಿಕ್ಕು ತಪ್ಪಿಸುವಂತಹ ಕೆಲಸ. ಈಗ ಪರಿಕ್ಷೆ ಸಮಯ ಆದ ಕಾರಣ ಹೀಗಾಗಿರಬಹುದು. ಈ ಹಿಂದೆ ಕೂಡ ವಿಮಾನ ತಡವಾಗಿದೆ ಎಂದು ಈ ರೀತಿ ಕರೆ ಮಾಡಿರುವ ಘಟನೆ ನಡೆದಿತ್ತು. ಕೆಲವೊಮ್ಮೆ 10 ಹುಸಿ ಕರೆಗಳ ಪೈಕಿ ಒಂದು ಟಾರ್ಗೆಟ್ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಹುಸಿ ಕರೆಗಳನ್ನು ನಾವು ನಿರ್ಲಕ್ಷಿಸುವುದಿಲ್ಲ. ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮಕೈಗೊಳ್ಳುತ್ತೇವೆ” ಎಂದರು.







