ಬೆಂಗಳೂರು| ಹೆಣ್ಣು ಭ್ರೂಣ ಪತ್ತೆ, ಗರ್ಭಪಾತ ಪ್ರಕರಣ; ಮತ್ತೆ ಐವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು: ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತದಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ ಮತ್ತೆ ಐವರು ಆರೋಪಿಗಳನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಚೆನ್ನೈನ ಡಾ.ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಚಂದನ್ ಬಲ್ಲಾಳ್, ಆತನ ಪತ್ನಿ ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸೆಪ್ಶನಿಸ್ಟ್ ರಿಝ್ಮಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ರನ್ನು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಹೆಣ್ಣು ಭ್ರೂಣ ಪತ್ತೆ ಮತ್ತು ಗರ್ಭಪಾತ ಜಾಲದ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು 2023ರ ಅಕ್ಟೋಬರ್ನಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಕುಮಾರ್ ಮತ್ತು ನಯನ್ ಕುಮಾರ್ ಎಂಬವರನ್ನು ಬಂಧಿಸಿದ್ದರು. ಈ ಆರೋಪಿಗಳು ಗರ್ಭಿಣಿಯರನ್ನು ಗುರುತಿಸಿ ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕಾನ್ ಮಾಡಿಸುತ್ತಿದ್ದರು. ಬಳಿಕ ಹೆಣ್ಣು ಭ್ರೂಣವಾದರೆ ಗರ್ಭಪಾತ ಮಾಡಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಈ ತನಿಖೆ ಮುಂದುವರೆದಂತೆ, ಪ್ರಕರಣದಲ್ಲಿ ವೈದ್ಯರ ಸಹಿತ ಇನ್ನೂ ಐವರು ಶಾಮೀಲಾಗಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಆರೋಪಿಗಳು ವ್ಯವಸ್ಥಿತವಾಗಿ ಜಾಲ ರೂಪಿಸಿಕೊಂಡು ದುಷ್ಕೃತ್ಯ ಎಸಗುತಿದ್ದರು. ಕಳೆದೆರಡು ವರ್ಷಗಳಿಂದ ನಿರಂತರವಾಗಿ ತಿಂಗಳಿಗೆ ಕನಿಷ್ಠ 20-25 ಭ್ರೂಣ ಹತ್ಯೆ ಮಾಡುತ್ತಿದ್ದರು ಎಂಬ ಸಂಗತಿ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಮೈಸೂರಿನ ಉದಯಗಿರಿಯ ಖಾಸಗಿ ಆಸ್ಪತ್ರೆ, ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಡೇ ಕೇರ್ ಸೆಂಟರ್ ಆನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







